ಗೋಣಿಕೊಪ್ಪಲು, ಆ. 14: ಬದುಕಿಗೆ ಆಸರೆಯಾಗಿದ್ದ ನರ್ಸರಿ ಗಿಡಗಳು ಇದೀಗ ಇಲ್ಲದಂತಾಗಿದ್ದು ಇಡೀ ಕುಟುಂಬ ಸಂಕಷ್ಟದಲ್ಲಿ ಸಿಲುಕಿದೆ. ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಳುಗೋಡು ಗ್ರಾಮದ ಫೌಲಿನಾ ಜೋಯಿ ಅವರು ಅನೇಕ ವರ್ಷಗಳಿಂದ ನರ್ಸರಿ ಗಿಡಗಳನ್ನು ಬೆಳೆಸುತ್ತಿದ್ದರು. ಈ ಗಿಡವನ್ನು ಮಾರಿ ತಮ್ಮ ಜೀವನವನ್ನು ಸಾಗಿಸುತ್ತಿದ್ದರು.

ಎರಡು ಎಕ್ರೆ ಭೋಗ್ಯಕ್ಕೆ ಪಡೆದ ಜಾಗದಲ್ಲಿ ಈ ಮಹಿಳೆಯು ಸುಮಾರು ವಿವಿಧ ತಳಿಯ 80 ಸಾವಿರಕ್ಕೂ ಅಧಿಕ ಗಿಡಗಳನ್ನು ನೆಟ್ಟು ಬೆಳೆಸಿದ್ದರು. ನರ್ಸರಿಯ ಗಿಡಗಳನ್ನು ತರಲು ಹಾಗೂ ಇದನ್ನು ಅಭಿವೃದ್ಧಿಪಡಿಸಲು ಸ್ಥಳೀಯ ಸಂಘ ಸಂಸ್ಥೆಗಳಿಂದ ಸಾಲವನ್ನು ಪಡೆದಿದ್ದರು. ನರ್ಸರಿಯಲ್ಲಿ ಕಾಫಿ ಗಿಡ, ಮೆಣಸಿನ ಬಳ್ಳಿ, ಸಿಲ್ವರ್, ಅಡಿಕೆ, ಏಲಕ್ಕಿ, ಸೇರಿದಂತೆ ಅನೇಕ ಬಗೆಯ ಹೂವಿನ ಗಿಡಗಳನ್ನು ಬೆಳೆಸಿದ್ದರು.

ಸಮೀಪವೇ ಹರಿಯುವ ತೋಡಿನಿಂದ ಈ ಹಿಂದೆ ನೀರನ್ನು ಬಳಸಿಕೊಳ್ಳುತ್ತಿದ್ದರು. ಆದರೆ ಈ ಬಾರಿ ಸುರಿದ ಮಹಾಮಳೆಯಿಂದ ತೋಡು ಒಂದೇ ಸಮನೆ ತುಂಬಿ ಬಂದ ಕಾರಣ ತೋಡಿನ ನೀರೆಲ್ಲವೂ ಇವರ ನರ್ಸರಿಗೆ ಹರಿದು ಬಂದಿದೆ. ನೀರಿನ ರಭಸಕ್ಕೆ ನರ್ಸರಿಯಲ್ಲಿದ್ದ ಗಿಡಗಳು ಕೊಚ್ಚಿಹೋಗಿವೆ. ಅನೇಕ ಗಿಡಗಳು ಮುರಿದುಹೋಗಿವೆ. ಮಳೆಯ ನೀರು ನಿಂತ ಕಾರಣ ಸಾವಿರಾರು ಗಿಡಗಳು ಕೊಳೆತು ಹೋಗಿವೆ.

ಇದನ್ನೇ ತನ್ನ ಬದುಕಾಗಿ ರೂಪಿಸಿಕೊಂಡಿದ್ದ ಮಹಿಳೆಗೆ ಇದೀಗ ದಿಕ್ಕೆ ತೋಚದಂತಾಗಿದೆ. ಅನೇಕ ಬಾರಿ ಕೃಷಿ, ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದರೂ ಇಲ್ಲಿಯ ತನಕ ಸ್ಥಳಕ್ಕೆ ಆಗಮಿಸಲಿಲ್ಲ ಎಂಬದು ಈ ಮಹಿಳೆಯ ಅಳಲು.

- ಹೆಚ್.ಕೆ. ಜಗದೀಶ್