ಮಡಿಕೇರಿ, ಆ. 15: ಜಿಲ್ಲೆಯಲ್ಲಿ ಕಳೆದ ಒಂದು ವಾರ ಸುರಿದ ಮಹಾ ಮಳೆಯ ರೌದ್ರನರ್ತನಕ್ಕೆ ವೀರಾಜಪೇಟೆ ಸಮೀಪದ ಬೇತ್ರಿ ಗ್ರಾಮ ಸಂಪೂರ್ಣ ದ್ವೀಪದಂತಾಗಿದೆ. ಕಳೆದ ಎರಡು ದಿನಗಳಿಂದ ಮಳೆಯ ಆರ್ಭಟ ಕಡಿಮೆಯಾಗಿದ್ದು, ಮನೆಗಳಿಗೆ ನುಗ್ಗಿದ್ದ ನೀರು ಕೊಂಚ ಇಳಿಕೆಯಾಗಿವೆ.

ಸುಮಾರು 80ಕ್ಕೂ ಹೆಚ್ಚು ಮನೆಗಳು ಪ್ರವಾಹಕ್ಕೆ ಸಿಲುಕಿ ಸಂಪೂರ್ಣ ಮುಳುಗಡೆಯಾಗಿವೆ. ಮನೆಗಳು ವಾಸಕ್ಕೆ ಯೋಗ್ಯವಲ್ಲದ ರೀತಿಯಲ್ಲಿ ನೀರು ನುಗ್ಗಿದೆ. ಕೆಲವೊಂದು ಮನೆಗಳು ಸಂಪೂರ್ಣ ಜಖಂಗೊಂಡಿವೆ.

ಪರಿಹಾರ ಕೇಂದ್ರದಲ್ಲಿ ಬೇತ್ರಿಯ ಸಂತ್ರಸ್ತರು ಆಶ್ರಯ ಪಡೆದಿದ್ದಾರೆ. ಮುಂದೆ ನಾವೇನು ಮಾಡೋದು ಎಂದು ಹೇಳಿ ಬೇತ್ರಿ ಜನರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಬೇತ್ರಿಗೆ ಭೇಟಿ ನೀಡಿಲ್ಲ. ನಮ್ಮ ಮನೆಯ ಸ್ಥಿತಿಯನ್ನು ಪರಿಶೀಲನೆ ನಡೆಸಿಲ್ಲ.

ನಾವು ನಮ್ಮ ನೋವನ್ನು ಯಾರೊಂದಿಗೆ ಹೇಳಲಿ ಎಂದು ಬೇತ್ರಿಯ ಜನತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶದ ಮಾತುಗಳನ್ನಾಡಿದ್ದಾರೆ. ಕಷ್ಟಪಟ್ಟು ಕೂಲಿ ಕೆಲಸ ಮಾಡಿ ಕಟ್ಟಿದ ಮನೆ ನೀರಿನಲ್ಲಿ ಮುಳುಗಡೆಯಾಗಿದೆ. ಸಾಲ ಮಾಡಿ ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸಿದ್ದೆ, ಪ್ರವಾಹಕ್ಕೆ ಕೊಚ್ಚಿ ಹೋಗಿದೆ, ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳು ನಮ್ಮಲ್ಲಿಗೆ ಭೇಟಿ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ‘ಮನೆ ಮುಳುಗಡೆ ಯಾಗುವದಕ್ಕಿಂತ ಮುನ್ನ ನನ್ನ ಮಕ್ಕಳನ್ನು ಕೈ ಹಿಡಿದು ನಾ ಓಡಿ ಬಂದೆ. ಮಕ್ಕಳ ಪುಸ್ತಕ, ಬಟ್ಟೆ ಮನೆಯಲ್ಲಿದ್ದ ವಸ್ತುಗಳು ಆಸ್ತಿ, ಎನ್ನಲು ಇದ್ದ ಮನೆಯ ಅರ್ಧ ಭಾಗ ಕುಸಿದಿದೆ. ಇಲ್ಲಿಗೆ ಯಾರು ಭೇಟಿ ನೀಡಿಲ್ಲ, ನಮ್ಮ ನೋವನ್ನು ಯಾರೊಂದಿಗೆ ಹೇಳಿ ಕೊಳ್ಳಲಿ’ ಎಂದು ಬೇತ್ರಿಯ ಧರಣಿ ಅವರು ತಮ್ಮ ಮಕ್ಕಳನ್ನು ಕೈಯಲ್ಲಿ ಹಿಡಿದು ಕಣ್ಣೀರಿಟ್ಟರು.

ಬೇತ್ರಿಯಲ್ಲಿ ಕೊಂಚ ಮಟ್ಟಿಗೆ ನೀರು ಇಳಿಕೆಯಾಗಿದ್ದರೂ, ಮನೆಗಳಿಗೆ ನುಗ್ಗಿದ ನೀರು ಇನ್ನೂ ಸಂಪೂರ್ಣ ಇಳಿಕೆಯಾಗಿಲ್ಲ. ಕೆಲವೊಂದು ಮನೆಗಳ ಅರ್ಧ ಭಾಗವೇ ಇಲ್ಲದಂತಾಗಿದೆ. ಹಾವುಗಳು ಸೇರಿಕೊಂಡಿರುವದರಿಂದ ಕೆಲವು ಮನೆಗಳನ್ನು ಶುಚಿತ್ವಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದು ಸ್ಥಳೀಯ ನಿವಾಸಿ ನೌಶಾದ್ ಹೇಳಿದರು.

ಮಾನವೀಯತೆ ಮೆರೆದ ಸಂಘಟನೆಗಳು

ಬೇತ್ರಿಯಲ್ಲಿನ ಸಂತ್ರಸ್ತರ ಸಮಸ್ಯೆ ತಿಳಿದು ಬೆಂಗಳೂರು, ಆನೇಕಲ್ ಯೂನಿಯನ್ ಅಸೋಸಿಯೇಷನ್ ಸಂಘಟನೆ ಇಲ್ಲಿನ ಜನರಿಗೆ ದಿನಬಳಕೆಗೆ ಬೇಕಾದ ವಸ್ತುಗಳನ್ನು ವಿತರಿಸಿದೆ. ಅಲ್ಲದ ವೀರಾಜಪೇಟೆಯ ಸಂಘಟನೆಯವರು ಭೇಟಿ ನೀಡಿ ಆಹಾರ ಪದಾರ್ಥಗಳನ್ನು ನೀಡಿದ್ದಾರೆ.

ವೀರಾಜಪೇಟೆ ಪಟ್ಟಣ ಪಂಚಾಯಿತಿ ಸದಸ್ಯ ಮೊಹಮ್ಮದ್ ರಫಿ ಬೇತ್ರಿಯಲ್ಲಿ ಪ್ರವಾಹಕ್ಕೆ ಸಿಲುಕಿ ಮನೆಗಳನ್ನು ಕಳೆದುಕೊಂಡವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ಬೇತ್ರಿ ಸಂತ್ರಸ್ತರ ಪರಿಸ್ಥಿತಿಯನ್ನು ತಿಳಿಸಲಾಗುವದು ಎಂದರು. ಸಂಘ-ಸಂಸ್ಥೆಗಳ ಮೂಲಕ ಆಹಾರ ಧಾನ್ಯಗಳ ವಿತರಣೆಗೆ ಬೇಕಾದ ವ್ಯವಸ್ಥೆ ಮಾಡಲಾಗುವದು ಎಂದು ಹೇಳಿದ್ದಾರೆ.

- ಕೆ.ಎಂ ಇಸ್ಮಾಯಿಲ್ ಕಂಡಕರೆ