ಮಡಿಕೇರಿ, ಆ. 15: ಆಧ್ಯಾತ್ಮಿಕತೆಯೊಂದಿಗೆ ನಿರಂತರ ಹಬ್ಬಗಳನ್ನು ಆಚರಿಸುವ ದೇಶ ಭಾರತದ ವೈಶಿಷ್ಟ್ಯಪೂರ್ಣ ಹಬ್ಬಗಳಲ್ಲಿ ರಕ್ಷಾಬಂಧನ ಅತ್ಯಂತ ಮಹತ್ವವಾಗಿದ್ದು; ಪವಿತ್ರ ಸಂಬಂಧüಗಳೊಂದಿಗೆ ಬಂಧುತ್ವ ಬೆಸೆಯಲಿರುವ ಆಚರಣೆಯಾಗಿದೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯದ ರಾಜಯೋಗಿನಿ ಸೋದರಿ ರಮಾಬೆನ್ ಅಭಿಪ್ರಾಯಪಟ್ಟರು. ಮೈಸೂರು ವಿಭಾಗದ ಸಂಯೋಜಕರಾಗಿರುವ ಅವರು ಇಲ್ಲಿನ ದಾಸವಾಳದ ಬ್ರಹ್ಮಕುಮಾರಿ ವಿದ್ಯಾಲಯ ಕೇಂದ್ರದಲ್ಲಿ ಇಂದು ದಿನದ ಮಹತ್ವ ಕುರಿತು ಮಾತನಾಡಿದರು.ಸ್ವತಃ ದೇವೇಂದ್ರ ತನ್ನ ಶ್ರೀರಕ್ಷೆಗಾಗಿ ಇಂದ್ರಾಣಿಯಿಂದ ರಕ್ಷೆ ಧರಿಸಿದರೆ; ಯಮನು ತನ್ನ ಸಹೋದರಿ ಯಮುನೆಯಿಂದ ಶ್ರೀರಕ್ಷೆ ಧಾರಣೆಗೈದ ಹಿನ್ನೆಲೆಯನ್ನು ನೆನಪಿಸಿದ ಅವರು; ಇಂತಹ ಮಹತ್ವಪೂರ್ಣ ಉತ್ಸವ; ಈ ಬಾರಿ ಸ್ವಾತಂತ್ರ್ಯೋತ್ಸವ ದಿನದಂದು ಏಕಕಾಲದಲ್ಲಿ ಬಂದಿರುವದು ಅತ್ಯಂತ ಹೆಮ್ಮೆಯೆಂದು ಬಣ್ಣಿಸಿದರು.ಭಾರತೀಯ ಸಮಾಜ ವ್ಯವಸ್ಥೆಯಲ್ಲಿ ಇಂದು ಸಹೋದರಿ ತನ್ನ ಸೋದರನಿಂದ ರಕ್ಷಣೆಯ ಸಂಕೇತವಾಗಿ ರಕ್ಷೆ ಕಟ್ಟುವಂತಹ ಪರಿಪಾಠ ರೂಢಿಯಲ್ಲಿದ್ದು; ಇದು ಕೇವಲ ತೋರಿಕೆಗೆ ಆಗಿರದೆ ಪವಿತ್ರ ಪ್ರೇಮ ಸಂಬಂಧಕ್ಕೆ ಸಾಕ್ಷಿಯೆಂದು ಉದಾಹರಿಸಿದರು. ಇನ್ನೋರ್ವ ರಾಜಯೋಗಿನಿ ಗಾಯತ್ರಿ ಸೋದರಿ ರಕ್ಷಾ ಬಂಧನದ ಶುಭಕಾಮನೆ ಯೊಂದಿಗೆ; ಶ್ರೀ ರಕ್ಷೆ ಧಾರಣೆ ಯೊಂದಿಗೆ ತಿಲಕವಿಟ್ಟು ಸಮಾಜದ ಒಳಿತಿಗೆ ಪ್ರಾರ್ಥಿಸಿದರು.ಜಿ. ರಾಜೇಂದ್ರ ಆಶಯ : ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ‘ಶಕ್ತಿ’ ಪ್ರಧಾನ ಸಂಪಾದಕರಾದ ಜಿ. ರಾಜೇಂದ್ರ ಅವರು; ಇಂದು ಪ್ರಾಕೃತಿಕ ಮುನಿಸಿನ ನಡುವೆ ಬಹುತೇಕ ಜನತೆ ಧಾರುಣ ಸಂಕಷ್ಟ ಪರಿಸ್ಥಿತಿಯಲ್ಲಿದ್ದು; ಅಂತಹವರ
(ಮೊದಲ ಪುಟದಿಂದ) ನೆರವಿಗೆ ಎಲ್ಲರೂ ಧಾವಿಸುವ ಮುಖಾಂತರ ಪರೋಪಕಾರದಲ್ಲಿ ತೊಡಗಿಸಿಕೊಳ್ಳುವ ಅಗತ್ಯವಿದೆ ಎಂದು ನುಡಿದರು. ರಾಜಯೋಗದ ಸಾಧನೆಯ ನಡುವೆ ದುರ್ಬಲರನ್ನು ಸದೃಢಗೊಳಿಸುವ ಕಾಯಕದೊಂದಿಗೆ ರಕ್ಷಾಬಂಧನದ ಆಚರಣೆಗೆ ಮೌಲ್ಯ ಕೊಡಬೇಕೆಂದು ಅವರು ಆಶಿಸಿದರು. ಮತ್ತೋರ್ವ ರಾಜಯೋಗಿನಿ ಸೋದರಿ ಧನಲಕ್ಷ್ಮೀ ಅವರು ನಿರೂಪಣೆಯೊಂದಿಗೆ ಇಂದು ವಿಶ್ವದ 145 ರಾಷ್ಟ್ರಗಳಲ್ಲಿ ಮೌಂಟ್ ಅಭು ಪರ್ವತದಿಂದ ಸಂದೇಶ ಹೊತ್ತು ಪವಿತ್ರ ರಕ್ಷಾಬಂಧನ ಆಚರಣೆ ಹಮ್ಮಿಕೊಂಡಿರುವದಾಗಿ ನೆನಪಿಸಿದರು. ವಿದ್ಯಾಲಯದ ಹಿತೈಷಿಗಳು ಹಾಗೂ ಬಳಗದವರಿಗೆ ಶ್ರೀರಕ್ಷೆಯೊಂದಿಗೆ ಪ್ರಸಾದ ಹಾಗೂ ವಿಜಯ ತಿಲಕ ಧಾರಣೆ ನಡೆಯಿತು.