ಮಡಿಕೇರಿ, ಆ. 15: ಮಹಾಮಳೆಯಿಂದಾಗಿ ಉಂಟಾದ ಪ್ರವಾಹದಿಂದಾಗಿ ಜಿಲ್ಲೆ ಸೇರಿದಂತೆ ರಾಜ್ಯದ ಹಲವೆಡೆ ಪ್ರವಾಹ ಉಂಟಾಗಿ ಜನಜೀವನ ಅಸ್ತವ್ಯಸ್ತಗೊಂಡು ಕರುನಾಡು ಶೋಕದಲ್ಲಿ ಮುಳುಗಿರುವ ಹಿನ್ನೆಲೆಯಲ್ಲಿ ಸಂಭ್ರಮದಿಂದ ಆಚರಿಸಬೇಕಾದ ದೇಶ ಸ್ವತಂತ್ರವಾದ ಈ ದಿನವನ್ನು ಸರಳವಾಗಿ ಆಚರಿಸುವಂತಾಗಿದೆ. ಸರಕಾರದ ಅಧಿಸೂಚನೆಯಂತೆ ಜಿಲ್ಲೆಯಾದ್ಯಂತ ಇಂದು 73ನೇ ಸ್ವಾತಂತ್ರ್ಯೋತ್ಸವವನ್ನು ಯಾವದೇ ಅದ್ಧೂರಿ-ಆಡಂಭರ ವಿಲ್ಲದೆ ಸರಳ ಸಾಂಪ್ರದಾಯಿಕವಾಗಿ ಆಚರಣೆ ಮಾಡಲಾಯಿತು.ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಸರಕಾರದ ಆದೇಶಾನುಸಾರ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಧ್ವಜಾರೋಹಣ ನೆರವೇರಿಸಿದರು. ಕೋಟೆ ಆವರಣ ದಲ್ಲಿ ಜರುಗಿದ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಕಳೆದ ವರ್ಷ ಮತ್ತು ಈ ವರ್ಷ ಜಿಲ್ಲೆ ಈ ಹಿಂದೆ ಕಂಡು ಕೇಳರಿಯದ ಪ್ರಕೃತಿ ವಿಕೋಪಕ್ಕೆ ತುತ್ತಾಗಿದ್ದು, ರಾಜ್ಯದ ಬಹುತೇಕ ಜಿಲ್ಲೆಗಳು ಪ್ರಕೃತಿ ವಿಕೋಪವನ್ನು ಎದುರಿಸುತ್ತಿವೆ. ಹಾಗಾಗಿ ಸ್ವಾತಂತ್ರ್ಯ ದಿನಾಚರಣೆ ಯನ್ನು ಸರಳವಾಗಿ ಆಚರಿಸಲು ಸರಕಾರ ನಿರ್ಧರಿಸಿದೆ ಎಂದರು.ಸ್ವಾತಂತ್ರ್ಯಕ್ಕಾಗಿ ಪ್ರಾಣ ಬಲಿದಾನಗೈದ ಮಹನೀಯರ ಆದರ್ಶ ವನ್ನು ಗೌರವಿಸಿ ಸಾಮರಸ್ಯದಿಂದ ಬಾಳ್ವೆ ನಡೆಸುವ ಜವಾಬ್ದಾರಿ ನಮ್ಮದಾಗಿದೆ. ಇದೇ ಸಂದರ್ಭದಲ್ಲಿ ನಮ್ಮ ದೇಶದ ಐಕ್ಯತೆ, ಸಮಗ್ರತೆ, ಶಾಂತಿ ಸಂಸ್ಕøತಿಗಳ ರಕ್ಷಣೆಗೆ ಕೈಜೋಡಿಸುವ ದಾಗಿ ಪಣತೊಡುತ್ತಾ, ಸ್ವಾತಂತ್ರ್ಯ ಹೋರಾಟದ ಶತಮಾನದ ಇತಿಹಾಸ ಇಂದಿನ ಅಭಿವೃದ್ಧಿಗೆ ಮುನ್ನೋಟ ವಾಗಲಿದೆ ಎಂದು ಆಶಿಸಿದರು.

ಸ್ವಾತಂತ್ರ್ಯ ಚಳವಳಿಯಲ್ಲಿ ಶ್ರಮಿಸಿದ ಕೊಡಗಿನ ಗುಡ್ಡೆಮನೆ ಅಪ್ಪಯ್ಯಗೌಡ, ಪಂದ್ಯಂಡ ಬೆಳ್ಯಪ್ಪ, ಸಿ.ಎಂ. ಪೂಣಚ್ಚ, ಕೊಡಂದೇರ ಪೂವಯ್ಯ, ಕೋದಂಡ ಅಪ್ಪಯ್ಯ, ಸಿ.ಎಂ. ವೆಂಕಪ್ಪಯ್ಯ, ಗುಂಡುಗುಟ್ಟಿ ಮಂಜುನಾಥಯ್ಯ, ಎಂ.ಎಂ. ಸಿದ್ದಿಕ್, ಎಚ್.ಆರ್. ಕೃಷ್ಣಯ್ಯ, ಕೋಳಿಮಾಡ ಕರುಂಬಯ್ಯ, ಮಂಡೇಪಂಡ ಕಾರ್ಯಪ್ಪ, ಮುಕ್ಕಾಟಿರ ಭೋಜಪ್ಪ, ಮಲ್ಲಂಗಡ ಚಂಗಪ್ಪ, ಮಾರಯ್ಯ ಮೊದಲಾದ ಮಹಾ ನಾಯಕರುಗಳಿಗೆ ನನ್ನ ಭಕ್ತಿ ಪೂರ್ವಕ ನಮನಗಳು ಎಂದು ಹೇಳಿದರು.

ಭಾರತ ಸ್ವಾತಂತ್ರ್ಯ ಚಳುವಳಿ ಸಂದರ್ಭದಲ್ಲಿ ಮಹಾತ್ಮಾ ಗಾಂಧೀಜೀ ಯವರು ಕೊಡಗಿಗೆ ಭೇಟಿ ನೀಡಿದ ಪ್ರಮುಖ ಸ್ವಾತಂತ್ರ್ಯ ಹೋರಾಟ ಗಾರರು. ಇವರ ವಿಚಾರಗಳು ಹಾಗೂ ಚಿಂತನೆಗಳು ಕೊಡಗಿನ ಹಲವು ನಾಯಕರಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಕಿಡಿಯನ್ನು ಹಚ್ಚಲು ಪ್ರೇರೇಪಿಸಿತ್ತು ಎಂದರೆ ತಪ್ಪಾಗ ಲಾರದು. ಬಹು ಹಿಂದಿನಿಂದಲೂ ಕೊಡಗು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡುವ ನಾಯಕರನ್ನು ಕೊಟ್ಟಿದೆ. ಅದೇ ಸಂದರ್ಭದಲ್ಲಿ ಹಲವರು ಭಾರತೀಯ ಸೈನ್ಯದಲ್ಲಿ ಪ್ರಮುಖ ಹುದ್ದೆಗಳನ್ನು ನಿರ್ವಹಿಸಿ ದೇಶಕ್ಕಾಗಿ ಸೇವೆ ಸಲ್ಲಿಸಿದ ಸ್ಮರಣೀಯರನ್ನು ಸಹ ನೀಡಿದೆ. ಈ ಪೈಕಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ, ಜನರಲ್ ತಿಮ್ಮಯ್ಯ, ಭಾರತೀಯ ಸೇನಾ ಇತಿಹಾಸದಲ್ಲಿ ಎಂದಿಗೂ ಮರೆಯ ಲಾಗದ ರತ್ನಗಳು. ಹೀಗೆ ಭಾರತೀಯ ಸ್ವಾತಂತ್ರ್ಯ ಚಳವಳಿಯಲ್ಲಿ ಕೊಡಗು ಸಹ ಭಾರತದ ಸ್ವಾತಂತ್ರ್ಯ ಚಳವಳಿಯ ಒಂದು ಭಾಗವಾಗಿ ತನ್ನದೇ ಆದ ಮಹತ್ವವನ್ನು ಪಡೆದುಕೊಂಡಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಕಳೆದ ವಾರ ಸುರಿದ ಧಾರಾಕಾರ ಮಳೆಯಿಂದಾಗಿ ಸಂಕಷ್ಟಕ್ಕೆ ಒಳಗಾಗುವಂತಾಯಿತು. ಅತಿವೃಷ್ಟಿ ಯಿಂದ ಜೀವಹಾನಿ, ಜಾನುವಾರು ಹಾನಿ ಸಂಭವಿಸಿದ್ದು, ಅನೇಕರು ಮನೆಗಳನ್ನು ಕಳೆದುಕೊಂಡು ನಾಗರಿಕರು ನಿರಾಶ್ರಿತರಾಗಿದ್ದಾರೆ. ನಿರಾಶ್ರಿತರ ಬದುಕನ್ನು ಕಟ್ಟಿಕೊಡಲು ರಾಜ್ಯ ಸರಕಾರ ಹಾಗೂ ಜಿಲ್ಲಾಡಳಿತ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಪ್ರಕೃತಿ ವಿಕೋಪದಿಂದ ನಿರಾಶ್ರಿತರ ಬದುಕನ್ನು ಪುನರ್ ನಿರ್ಮಿಸಲು ಎಲ್ಲರೂ ಕೈಜೋಡಿ ಸೋಣ ಎಂದು ಕರೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನೀಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪಿ, ಜಿ.ಪಂ. ಸಿಇಒ ಕೆ.ಲಕ್ಷ್ಮೀಪ್ರಿಯಾ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹಾ, ಉಪ ವಿಭಾಗಾಧಿಕಾರಿ ಟಿ. ಜವರೇಗೌಡ ಇತರರು ಪಾಲ್ಗೊಂಡಿ ದ್ದರು. ಇದೇ ಸಂದರ್ಭದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ವಿತರಿಸಲಾಯಿತು.

ಪಥ ಸಂಚಲನ: ಸರಳ ಆಚರಣೆ ಯಿಂದಾಗಿ ಈ ಬಾರಿ ಪಥ ಸಂಚಲನ ದಲ್ಲಿ ಕೆಲವೇ ತಂಡಗಳು ಪಾಲ್ಗೊಂಡಿ ದ್ದವು. ಡಿಎಆರ್ ಇನ್ಸ್‍ಪೆಕ್ಟರ್ ರಾಚಯ್ಯ ನೇತೃತ್ವದಲ್ಲಿ ಅರಣ್ಯ ಇಲಾಖೆ, ಡಿಎಆರ್ ಪೊಲೀಸ್, ಸಿವಿಲ್ ಪೊಲೀಸ್, ಹೋಂಗಾಡ್ರ್ಸ್, ಕೂಡಿಗೆ ಸೈನಿಕ್ ಶಾಲೆಯ ವಿದ್ಯಾರ್ಥಿಗಳು, ಪೊಲೀಸ್ ಬ್ಯಾಂಡ್‍ನೊಂದಿಗೆ ಪಥ ಸಂಚಲನದಲ್ಲಿ ಪಾಲ್ಗೊಂಡಿ ದ್ದರು. ಮಳೆ, ವಿಕೋಪ ಹಿನ್ನೆಲೆಯಲ್ಲಿ ಸಾರ್ವಜನಿಕರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿತ್ತು.

ಸಂತ ಮೈಕಲರ ಪ್ರೌಢಶಾಲಾ ವಿದ್ಯಾರ್ಥಿಗಳು ನಾಡಗೀತೆ, ರೈತಗೀತೆ ಹಾಡಿದರು. ಕಡಗದಾಳು ಪ್ರೌಢ ಶಾಲೆಯ ಶಿಕ್ಷಕಿ ಎಸ್.ಡಿ. ಅನಿತಾ ಕಾರ್ಯಕ್ರಮ ನಿರೂಪಿಸಿದರು.