ವೀರಾಜಪೇಟೆ, ಅ. 15: ಕೊಡಗಿನಲ್ಲಿ ಸಂಭವಿಸಿದ ಜಲಪ್ರಳಯಕ್ಕೆ ತುತ್ತಾದ ಸಂತ್ರಸ್ತ ಕುಟುಂಬಗಳಿಗೆ ನೆರವು ನೀಡಲು ವೀರಾಜಪೇಟೆ ನಗರದ ಯುವಕರ ಮನವಿಗೆ ಸ್ಪಂದಿಸಿ, ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಎಂ. ದೊಡ್ಡಿ ಭಾರತಿ ನಗರದ ಯುವಮಿತ್ರ ಬಳಗ ಸಿದ್ದಾಪುರ, ಗುಹ್ಯ, ಕರಡಿಗೋಡು ಪರಿಹಾರ ಕೇಂದ್ರ ಮತ್ತು ಕೊಂಡಗೇರಿಯ ಸಂತ್ರಸ್ತ ಕುಟುಂಬಗಳನ್ನು ಭೇಟಿ ಮಾಡಿ ಗೃಹ ಬಳಕೆ ಮತ್ತು ದಿನಬಳಕೆಯ ವಸ್ತುಗಳನ್ನು ನೀಡಿ ಸಾಂತ್ವನ ಹೇಳಿದರು.
ಸಿದ್ದಾಪುರ ಗುಹ್ಯ ಬಿ.ಜಿ.ಎಸ್. ಪ್ರೌಢಶಾಲೆಯಲ್ಲಿ ಅಶ್ರಯ ಪಡೆದ ಕೂಡುಗದ್ದೆ, ಕಕ್ಕಟ್ಟುಕಾಡು, ಗುಹ್ಯ ನೆರೆ ಪೀಡಿತ ಪ್ರದೇಶಗಳ 40 ಕುಟುಂಬಗಳು, ಕರಡಿಗೋಡು ಸಕಾರಿ ಪ್ರಾಥಮಿಕ ಶಾಲೆಯಲ್ಲಿ ಅಶ್ರಯ ಪಡೆದ 92 ಕುಟುಂಬಗಳು ಸಿದ್ದಾಪುರ ಜಿ.ಎಂ.ಪಿ. ಶಾಲೆಯಲ್ಲಿ ಆಶ್ರಯ ಪಡೆದ 58 ಕುಟುಂಬಗಳು ಮತ್ತು ಕೊಂಡಂಗೇರಿ ಸುನ್ನಿ ಜಮಾಅತ್ ಮದರಸದಲ್ಲಿ ಆಶ್ರಯ ಪಡೆದ ಸಂತ್ರಸ್ತ ಕುಟಂಬಗಳಿಗೆ ಅಗತ್ಯ ಸಾಮಗ್ರಿಗಳನ್ನು ವಿತರಿಸಲಾಯಿತು.ಮಂಡ್ಯ ಜಿಲ್ಲೆಯ ಉಪನ್ಯಾಸಕ ಕುಮಾರ್ ನೇತೃತ್ವದಲ್ಲಿ 10 ಮಂದಿ ಯುವ ಮಿತ್ರರೊಂದಿಗೆ ವೀರಾಜಪೇಟೆಯ ಪಿ.ಎ. ಮಂಜುನಾಥ್, ಯೋಗೇಶ್ ನಾಯ್ಡು, ನಿತಿನ್, ರಂಜನ್ ನಾಯ್ಡು, ರಾಕೇಶ್ ಬಿದ್ದಪ್ಪ ಮತ್ತು ಕಾಲೇಜು ಉಪನ್ಯಾಸಕ ಶ್ರೀನಿಶ್ ಸಾಮಗ್ರಿಗಳನ್ನು ವಿತರಿಸುವಲ್ಲಿ ಸಹಕಾರ ನೀಡಿದರು. - ಕೆ.ಕೆ.ಎಸ್. ವೀರಾಜಪೇಟೆ