ಸಿದ್ದಾಪುರ,ಆ. 15: ಪ್ರವಾಹಕ್ಕೆ ಸಿಲುಕಿ ಮನೆಯೊಂದಿಗೆ ಮಗಳ ಮದುವೆಗೆಂದು ಕೂಡಿಟ್ಟಿದ್ದ ಚಿನ್ನಾಭರಣಗಳು ನೀರು ಪಾಲಾಗಿ ಕುಟುಂಬವೊಂದು ಕಣ್ಣೀರಿನಲ್ಲಿ ಕೈತೊಳೆಯುತ್ತಿದೆ. ಈ ಬಾರಿಯ ಮಳೆಯ ಪ್ರವಾಹಕ್ಕೆ ಸಿಲುಕಿಕೊಂಡು ನೆಲ್ಯಹುದಿಕೇರಿಯ ಕುಂಬಾರಗುಂಡಿ ಗ್ರಾಮದ ಸಬಾಷ್ಟೀನ್-ರೋಸಿ ದಂಪತಿಯ ಮನೆ ಕುಸಿಯಿತು.

ದಂಪತಿ ಕಷ್ಟಪಟ್ಟು ಸಂಪಾದನೆ ಮಾಡಿಟ್ಟಿದ್ದ ಚಿನ್ನಾಭರಣಗಳು ,ನಗದು, ಮನೆಯ ಎಲ್ಲಾ ವಸ್ತುಗಳು ನೀರು ಪಾಲಾದವು. ಇದೇ ಸೆಪ್ಟೆಂಬರ್ 9ರಂದು ಮಗಳ ಮದುವೆ ನಡೆಸಲು ನಿಶ್ಚಯಿಸಲಾಗಿತ್ತು. 9 ರಂದು ಪುತ್ರಿಯ ವಿವಾಹ ಕಾರ್ಯದ ಸಂತೋಷದಲ್ಲಿದ್ದ ಕುಟುಂಬಕ್ಕೆ ಪ್ರವಾಹವು ಬರಸಿಡಿಲಿನಂತೆ ಬಡಿಯಿತು. ಮಗಳ ಮದುವೆಗಾಗಿ ಖರೀದಿಸಿಟ್ಟ ಚಿನ್ನಾಭರಣಗಳು, ಹೊಸ ಬಟ್ಟೆಗಳು, ಪೀಠೋಪಕರಣ, ಪಾತ್ರೆಗಳು, ಮದುವೆಗೆ ಕೂಡಿಟ್ಟ ಹಣ ಎಲ್ಲವೂ ಕಾವೇರಿ ನದಿಯ ಒಡಲು ಸೇರಿತು. ಸಬಾಷ್ಟೀನ್-ರೋಸಿ ದಂಪತಿಗಳಿಗೆ ಇದರಿಂದಾಗಿ ದಿಕ್ಕುತೋಚದಂತಾಗಿದ್ದು; ಹಸೆ ಮಣೆ ಏರಬೇಕಿದ್ದ ಇವರ ಪುತ್ರಿ ಪ್ರಿನ್ಸ್ ನೆಲ್ಯಹುದಿಕೇರಿಯ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ.

ವಿವಾಹದ ತುರ್ತು ಖರ್ಚಿಗೆಂದು ಮನೆಯ ಒಳಗಿಟ್ಟಿದ್ದ ರೂ. 20ಸಾವಿರ ನಗದು ,15 ಪವನ್ ಚಿನ್ನಾಭರಣ ಇಲ್ಲವಾಗಿದೆ. ಇನ್ನೊಂದೆಡೆ ಪುತ್ರ ಬಳಲುತ್ತಿದ್ದು ಈತನ ಶಸ್ತ್ರ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿದ್ದಾರೆ. ಮುಂದಿನ ತಿಂಗಳು ಮತ್ತೆ ಚಿಕಿತ್ಸೆಗೆ ತೆರಳಬೇಕಾಗಿತ್ತು ಆದರೆ ಹಣವು ಇಲ್ಲದೆ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಕೂಲಿ ಮಾಡಿ ಜೀವನ ಸಾಗಿಸುತ್ತಿರುವ ಇವರಿಗೆ ದಿಕ್ಕು ತೋಚದಂತಾಗಿದೆ. -ವಾಸು