ಕುಶಾಲನಗರ, ಆ. 15: ಕುಶಾಲನಗರ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಸ್ವಚ್ಛತಾ ಕಾರ್ಯ ಭರದಿಂದ ಸಾಗುತ್ತಿದ್ದು ಪಂಚಾಯ್ತಿ ಅಧಿಕಾರಿ ಸಿಬ್ಬಂದಿಗಳು ಹಗಲು ರಾತ್ರಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪಟ್ಟಣದ ಸಾಯಿ ಬಡಾವಣೆ, ದಂಡಿನಪೇಟೆ, ಬಸಪ್ಪ, ಇಂದಿರಾ ಮತ್ತಿತರ ಬಡಾವಣೆಗಳಲ್ಲಿ 3 ಹಂತದಲ್ಲಿ ಸ್ವಚ್ಛತಾ ಕಾರ್ಯ ನಡೆಸಿದ್ದು ಇದೀಗ ಅಂತಿಮ ಹಂತದ ಸ್ವಚ್ಛತೆ ನಡೆದಿದೆ.

ಮನೆಗಳ ಸ್ವಚ್ಛತೆಯೊಂದಿಗೆ ಚರಂಡಿ ರಸ್ತೆ ಆವರಣಗಳನ್ನು ಸ್ವಚ್ಛ ಮಾಡಲಾಗಿದ್ದು ಯಾವದೇ ರೋಗರುಜಿನಗಳು ಬರದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ಪಪಂ ಆರೋಗ್ಯಾಧಿಕಾರಿ ಉದಯ್ ತಿಳಿಸಿದ್ದಾರೆ.

ಮೈಸೂರು, ಸೋಮವಾರಪೇಟೆ ವ್ಯಾಪ್ತಿಯಿಂದ 30 ಕ್ಕೂ ಅಧಿಕ ಪೌರಕಾರ್ಮಿಕರು ಸ್ವಚ್ಛತಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದು ಸಕ್ಕಿಂಗ್ ಮೆಷಿನ್, ಕಸ ವಿಲೇವಾರಿ ಮಾಡುವ ವಾಹನಗಳು ಬೆಳಗಿನಿಂದ ಸಂಜೆ ತನಕ ಕಾರ್ಯನಿರ್ವಹಿಸುತ್ತಿರುವದು ಕಂಡುಬಂತು. ನದಿ ತಟದ 200 ಮೀ ದೂರದ ತನಕ ಪಟ್ಟಣದ ವಿವಿಧ ಬಡಾವಣೆಗಳ ಮನೆಗಳು 3 ದಿನಗಳ ಕಾಲ ಜಲಾವೃತಗೊಂಡಿದ್ದು ಸಂಪೂರ್ಣ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಇದೀಗ ಕಾವೇರಿ ನದಿಯಲ್ಲಿ ಹರಿವಿನ ಪ್ರಮಾಣ ಕ್ಷೀಣಸಿದ್ದು ಪಟ್ಟಣದಲ್ಲಿ ದೈನಂದಿನ ಚಟುವಟಿಕೆ ಸಹಜ ಸ್ಥಿತಿಗೆ ಮರಳುತ್ತಿದೆ.