ಕೂಡಿಗೆ, ಆ. 13 : ಸೀಗೆಹೊಸೂರು ಯಲಕನೂರು ಮಧ್ಯೆ ಇರುವ ಕಕ್ಕೆಹೊಳೆ ಸಣ್ಣ ಅಣೆಕಟ್ಟೆಯಿಂದ ವರ್ಷಂಪ್ರತಿ ಜುಲೈ ಅಂತ್ಯದಲ್ಲಿ ನೀರು ಹರಿಸುವದು ವಾಡಿಕೆ. ಆದರೆ, ಈಗಾಗಲೇ ಸೋಮವಾರಪೇಟೆ ವ್ಯಾಪ್ತಿಯಲ್ಲಿ ಹೆಚ್ಚು ಮಳೆ ಬಿದ್ದ ಪರಿಣಾಮ ಬ್ರಿಟೀಷ್ ಕಾಲದಲ್ಲಿ ನಿರ್ಮಿಸಿದ ಕಕ್ಕೆಹೊಳೆ ಸಣ್ಣ ಅಣೆಕಟ್ಟೆಯು ತುಂಬಿದ್ದರೂ ಅದಕ್ಕೆ ಒಳಪಡುವ ಉಪನಾಲೆಗಳಿಗೆ ನೀರನ್ನು ಹರಿಸದ ಹಿನ್ನೆಲೆಯಲ್ಲಿ ಈ ವ್ಯಾಪ್ತಿಯಲ್ಲಿ ನಾಟಿ ಕಾರ್ಯ ಸ್ಥಗಿತಗೊಂಡಿದೆ.

ಕಕ್ಕೆಹೊಳೆ ನಾಲೆಯು ಸಣ್ಣ ನೀರಾವರಿ ಇಲಾಖೆಗೆ ಸೇರಿದ್ದು, ಇಲಾಖೆಯವರು ನಾಲೆಯಲ್ಲಿ ಹೂಳು ತುಂಬಿದ್ದನ್ನು ತೆಗೆದು ಮತ್ತು ಗಿಡಗಂಟಿಗಳನ್ನು ಕಡಿದು ನೀರು ಸರಾಗವಾಗಿ ಹರಿಯುವಂತೆ ಮಾಡಲಾಗಿದ್ದರೂ, ಇದುವರೆಗೂ ನಾಲೆಯಲ್ಲಿ ನೀರನ್ನು ಹರಿಸಿಲ್ಲ. ಸೀಗೆಹೊಸೂರು, ಮದಲಾಪುರ, ಗಂಧದಹಾಡಿ, ಗಂಗೆಕಲ್ಯಾಣ ಪ್ರದೇಶಗಳ ನೂರಾರು ಎಕರೆ ಕೃಷಿ ಭೂಮಿಗೆ ನೀರಿನ ಸೌಲಭ್ಯವಿದೆ. ಆದರೆ, ಸಂಬಂಧಪಟ್ಟ ಅಧಿಕಾರಿಗಳು ಇದರತ್ತ ಗಮನಹರಿಸದೆ, ಮುಖ್ಯನಾಲೆಯ ದುರಸ್ತಿಯಲ್ಲಿಯು ಸ್ವಲ್ಪ ಸ್ವಲ್ಪ ಭಾಗಗಳಲ್ಲಿ ಕಾರ್ಯನಿರ್ವಹಿಸಿರುವದು ಕಂಡುಬರುತ್ತಿದೆ. ಸಣ್ಣ ನೀರಾವರಿ ಇಲಾಖೆಯವರು ನೀರನ್ನು ಹರಿಸುವ ಮೂಲಕ ರೈತರು ಬೇಸಾಯ ಮಾಡಲು ಸಹಕಾರಿಗಳಾಗಬೇಕು. ಮುಂದಿನ ಬೇಸಿಗೆಯಲ್ಲಿ ಇನ್ನುಳಿದ ಕಾಮಗಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕೆಂದು ಈ ವ್ಯಾಪ್ತಿಯ ಗ್ರಾ.ಪಂ ಸದಸ್ಯರಾದ ಟಿ.ಕೆ.ವಿಶ್ವನಾಥ್, ಕೆ.ಜೆ.ಮಂಜಯ್ಯ, ದಸ್ವಿಕೃಷ್ಣ ಸೇರಿದಂತೆ ನೂರಾರು ರೈತರು ಒತ್ತಾಯಿಸಿದ್ದಾರೆ.

-ನಾಗರಾಜಶೆಟ್ಟಿ