ಮಡಿಕೇರಿ, ಆ. 12: ಮುಖ್ಯಮಂತ್ರಿ ಮಾತೃಶ್ರೀ ಯೋಜನೆಯಡಿ ಬಿಪಿಲ್ ಕುಟುಂಬದ ಗರ್ಭಿಣಿಯರಿಗೆ ಮೊದಲ 2 ಜೀವಂತ ಹೆರಿಗೆಯ ಪೂರ್ವದ ಕೊನೆಯ 3 ತಿಂಗಳು ಹಾಗೂ ಬಾಣಂತಿಯರಿಗೆ ಹೆರಿಗೆ ನಂತರದ 3 ತಿಂಗಳ ಕಾಲ ಮಾಸಿಕ ರೂ. 1 ಸಾವಿರ (ಒಟ್ಟು ರೂ. 6 ಸಾವಿರ) ಫಲಾನುಭವಿಗಳ ಆಧಾರ್ ಲಿಂಕ್ಡ್ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತದೆ.

ಫಲಾನುಭವಿಯು ಬಿಪಿಎಲ್ ಕಾರ್ಡ್‍ನ್ನು ಕಡ್ಡಾಯವಾಗಿ ಹೊಂದಿದ್ದು ಅರ್ಜಿ ಸಲ್ಲಿಸುವಾಗ 7 ತಿಂಗಳ ಗರ್ಭಿಣಿಯಾಗಿದ್ದು, ಕನಿಷ್ಟ 1 ನಿಯಮಿತ ಆರೋಗ್ಯ ತಪಾಸಣೆಗೆ ಒಳಪಟ್ಟಿರಬೇಕು. ಎರಡನೇ ಅರ್ಜಿಯನ್ನು ಸಾಂಸ್ಥಿಕ ಹೆರಿಗೆಯ ನಂತರ ನೀಡಬೇಕಿದೆ.

ಮಾತೃಶ್ರೀ ಯೋಜನೆಯ ನೋಂದಣಿಗೆ ನಿಗದಿಪಡಿಸಿದ ಅರ್ಜಿ ನಮೂನೆಗಳು ಅಂಗನವಾಡಿ ಕೇಂದ್ರಗಳಲ್ಲಿ ಉಚಿತವಾಗಿ ದೊರೆಯುತ್ತವೆ. ಭರ್ತಿ ಮಾಡಿದ ಅರ್ಜಿಯೊಂದಿಗೆ ಬಿಪಿಎಲ್ ಕಾರ್ಡ್, ತಾಯಿ ಮತ್ತು ಮಗುವಿನ ಸುರಕ್ಷತಾ ಕಾರ್ಡ್, ಫಲಾನುಭವಿಯ ಹಾಗೂ ಪತಿಯ ಆಧಾರ್ ಕಾರ್ಡ್ ಪ್ರತಿ ಹಾಗೂ ಫಲಾನುಭವಿಯ ಬ್ಯಾಂಕ್ ಖಾತೆಯ ವಿವರಗಳೊಂದಿಗೆ ಸಂಬಂಧಿಸಿದ ಅಂಗನವಾಡಿ ಕೇಂದ್ರಗಳಿಗೆ ಸಲ್ಲಿಸಬಹುದಾಗಿದೆ ಎಂದು ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.