ಮಡಿಕೇರಿ, ಆ.12: ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅತಿವೃಷ್ಟಿಯಿಂದ ಉದ್ಭವಿಸಿರುವ ಸಮಸ್ಯೆಗಳನ್ನು ಪರಿಹರಿಸುವ ಸಂಬಂಧ ಜಿಲ್ಲಾ ಮೇಲುಸ್ತುವಾರಿ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಡಾ.ರಾಜ್ ಕುಮಾರ್ ಖತ್ರಿ ಅವರು ನಗರದ ಹೊರವಲಯದ ಜಿ.ಪಂ.ನೂತನ ಭವನದ ಸಾಮಥ್ರ್ಯ ಸೌಧದಲ್ಲಿರುವ ಪರಿಹಾರ ಕೇಂದ್ರಕ್ಕೆ ಸೋಮವಾರ ಭೇಟಿ ನೀಡಿ ಸಂತ್ರಸ್ತರಿಗೆ ಧೈರ್ಯ ತುಂಬಿದರು.

ಸಂತ್ರಸ್ತರ ಊರು, ವೃತ್ತಿ, ಜೊತೆಗೆ ಆರೋಗ್ಯ ವಿಚಾರಿಸಿದ ಡಾ.ರಾಜ್‍ಕುಮಾರ್ ಖತ್ರಿ ಅವರು ಪರಿಹಾರ ಕೇಂದ್ರದಲ್ಲಿ ಊಟೋಪಚಾರ, ಜೊತೆಗೆ ಹಾಸಿಗೆ, ಹೊದಿಕೆ ಮತ್ತಿತರ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆಯೇ ಎಂದು ಸಂತ್ರಸ್ತರಿಂದ ಮಾಹಿತಿ ಪಡೆದರು.

ಯಾವದಾರೂ ಸಮಸ್ಯೆ ಇದ್ದಲ್ಲಿ ಜಿಲ್ಲಾಡಳಿತ ಗಮನಕ್ಕೆ ತರಬೇಕು. ಆರೋಗ್ಯ ಕಡೆ ಗಮನಹರಿಸಬೇಕು. ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸಬೇಕು. ಯಾವದೇ ಕಾರಣಕ್ಕಲೂ ವಿಚಲಿತರಾಗಬಾರದು ಎಂದು ಸಂತ್ರಸ್ತರಿಗೆ ಧೈರ್ಯ ಹೇಳಿದರು.

ಬಳಿಕ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರಿಂದ ಪರಿಹಾರ ಕೇಂದ್ರಕ್ಕೆ ಸಂಬಂಧಿಸಿದಂತೆ ಹಲವು ಮಾಹಿತಿ ಪಡೆದರು. ಜಿ.ಪಂ.ಸಿಇಒ ಕೆ.ಲಕ್ಷ್ಮಿಪ್ರಿಯ, ಪರಿಹಾರ ಕೇಂದ್ರದ ನೋಡಲ್ ಅಧಿಕಾರಿ ಜಯಣ್ಣ, ಪರಿಹಾರ ಕೇಂದ್ರ ಆರೋಗ್ಯಾಧಿಕಾರಿ ಡಾ.ರಾಜ್‍ಕುಮಾರ್, ತಾ.ಪಂ.ಸಹಾಯಕ ನಿರ್ದೇಶಕರಾದ ಜೀವನ್ ಕುಮಾರ್, ಕಂದಾಯ ನಿರೀಕ್ಷಕರಾದ ಶಿವಕುಮಾರ್ ಇತರರು ಇದ್ದರು.