ಕುಶಾಲನಗರ, ಆ. 13: ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ಅಂತೋಣಿ ಸಬಾಸ್ಟಿನ್ ಕುಶಾಲನಗರ ನೆರೆ ಪರಿಹಾರ ಕೇಂದ್ರಕ್ಕೆ ಮಂಗಳವಾರ ಭೇಟಿ ನೀಡಿದರು.

ಸಂತ್ರಸ್ತರ ಕುಂದು ಕೊರತೆಗಳನ್ನು ಆಲಿಸಿದ ಅವರು ಆಶ್ರಯ ಕೇಂದ್ರದ ನೋಡೆಲ್ ಅಧಿಕಾರಿ ಮಲ್ಲೇಸ್ವಾಮಿ ಅವರಿಂದ ಮಾಹಿತಿ ಪಡೆದು ಕೊಂಡರು. ಸಂತ್ರಸ್ತರಿಗೆ ವಿತರಿಸುತ್ತಿರುವ ಆಹಾರ, ಆಶ್ರಯ ಕೇಂದ್ರದ ಸ್ಥಿತಿಗತಿಗಳ ಬಗ್ಗೆ ಪರಿಶೀಲನೆ ನಡೆಸಿದರು.

ಇದೇ ಸಂದರ್ಭ ಸಂತ್ರಸ್ತ ಕೇಂದ್ರದಲ್ಲಿರುವ ಕೆಲವರು ವ್ಯವಸ್ಥೆ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದು ಗೋಚರಿಸಿತು. ಕೇಂದ್ರದಲ್ಲಿ ವಾಸ್ತವ್ಯ ಹೂಡುವ ಸಂತ್ರಸ್ತರಿಗೆ ಮಾತ್ರ ಅಗತ್ಯ ಸಾಮಗ್ರಿಗಳನ್ನು ಪೂರೈಕೆ ಮಾಡಲಾಗುತ್ತಿದೆ. ಬೇರೆಡೆ ವಾಸ್ತವ್ಯ ಹೂಡುವವರಿಗೆ ಚಾಪೆ, ಕಂಬಳಿ ನೀಡುತ್ತಿಲ್ಲ ಎಂದು ಸಂತ್ರಸ್ತರು ತಮ್ಮ ಅಳಲನ್ನು ತೋಡಿಕೊಂಡರು.

ಅಲ್ಲದೆ ಬಡಾವಣೆಗಳಲ್ಲಿ ಸ್ಥಳೀಯ ಅಧಿಕಾರಿಗಳು ಸಮರ್ಪಕವಾಗಿ ಸಮಸ್ಯೆಗಳಿಗೆ ಸ್ಪಂದನೆ ನೀಡುತ್ತಿಲ್ಲ ಎನ್ನುವ ದೂರುಗಳು ಕೇಳಿಬಂದವು.

ಸಂತ್ರಸ್ತರ ಸಮಸ್ಯೆ ಆಲಿಸಿದ ನಂತರ ಮಾತನಾಡಿದ ಅಂತೋಣಿ ಸಬಾಸ್ಟಿನ್, ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗುವದು ಎಂದರು.

ಆಯೋಗದ ಸದಸ್ಯ ಪರಶುರಾಮ್, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಅರುಂಧತಿ, ತಹಶೀಲ್ದಾರ್ ಗೋವಿಂದರಾಜು, ತಾ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುನಿಲ್ ಇದ್ದರು.