ಮಡಿಕೇರಿ, ಆ. 12: ಕೊಡಗು ಜಿಲ್ಲೆಯಲ್ಲಿ ಮುಂದುವರಿದ ಮಳೆ, ರಸ್ತೆ ಸಮಸ್ಯೆ, ಶಾಲೆಗಳಲ್ಲಿ ಸಂತ್ರಸ್ತರ ಪರಿಹಾರ ಕೇಂದ್ರಗಳನ್ನು ಆರಂಭಿಸಿರುವ ಕಾರಣ ಜಿಲ್ಲಾಡಳಿತದಿಂದ ಎರಡು ದಿನಗಳ ತನಕ ಎಲ್ಲ ಅಂಗನವಾಡಿ ಕೇಂದ್ರಗಳು, ಶಾಲಾ-ಕಾಲೇಜುಗಳಿಗೆ ರಜೆಯನ್ನು ಎರಡು ದಿವಸ ವಿಸ್ತರಿಸಲಾಗಿದೆ.
ಶಾಲೆ-ಕಾಲೇಜು ರಜೆ ಮುಂದುವರಿಕೆ ಕೊಡಗು ಜಿಲ್ಲೆಯಾದ್ಯಂತ ಮಳೆ ಮುಂದುವರೆದಿದ್ದು, ಕಳೆದ ಕೆಲವು ದಿನಗಳ ಹಿಂದೆ ಬಿದ್ದ ಭಾರೀ ಮಳೆಯಿಂದ ಕೆಲವು ರಸ್ತೆ ಸಂಪರ್ಕ ಕಡಿತಗೊಂಡಿರುವದರಿಂದ ಹಾಗೂ ಕೆಲವು ಶಾಲೆಗಳಲ್ಲಿ ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಪರಿಹಾರ ಕೇಂದ್ರಗಳನ್ನು ತೆರೆದಿರುವದರಿಂದ ತಾ. 13 ಹಾಗೂ 14 ರಂದು ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳು ಸೇರಿದಂತೆ ಎಲ್ಲ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹವಾಮಾನ ಮುನ್ಸೂಚನೆಕೊಡಗಿನಲ್ಲಿ ಇಂದಿನಿಂದ ಮುಂದಿನ 5 ದಿನಗಳವರೆಗೆ ಜಿಲ್ಲೆಯಾದ್ಯಂತ ಸಾಮಾನ್ಯ ಮಳೆಯಾಗಲಿದೆ ಹಾಗೂ ಒಳನಾಡು ಪ್ರದೇಶಗಳಲ್ಲಿ ಅಲ್ಲಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಈಗಾಗಲೇ ಜಿಲ್ಲೆಯಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿಯಿಂದ ಕೆಲವು ಪ್ರದೇಶಗಳಲ್ಲಿ ಆದ ಭೂಕುಸಿತದಿಂದ ರಸ್ತೆ ಸಂಪರ್ಕ ಕಡಿತಗೊಂಡಿದೆ. ಆದ್ದರಿಂದ ಸಾರ್ವಜನಿಕರು ಮತ್ತು ಪ್ರವಾಸಿಗರು ಎಚ್ಚರಿಕೆ ಯಿಂದಿರಲು ಜಿಲ್ಲಾಡಳಿತ ಮನವಿ ಮಾಡಿಕೊಂಡಿದೆ.
ಪ್ರಕೃತಿ ವಿಕೋಪ ಸಂಬಂಧಿತ ಯಾವದೇ ಸಮಸ್ಯೆಗಳಿಗೆ ತುರ್ತು ಸೇವೆಗೆ ಟೋಲ್ ಫ್ರೀ ಸಂಖ್ಯೆ 24x7 ಕಂಟ್ರೋಲ್ ರೂಂ. 08272-221077, ವ್ಯಾಟ್ಸ್‍ಅಪ್ ನಂ. 8550001077ರಲ್ಲಿ ಸಂಪರ್ಕಿಸಲು ಜಿಲ್ಲಾಧಿಕಾರಿ ಸಲಹೆ ನೀಡಿದ್ದಾರೆ.
ಬದಲಿ ಸಂಚಾರ ವ್ಯವಸ್ಥೆ
ಜಿಲ್ಲೆಯಲ್ಲಿ ಉಂಟಾದ ಪ್ರವಾಹ ಸಂದರ್ಭ ವಿವಿಧ ಭಾಗಗಳಲ್ಲಿ ಕೆಲವು ರಸ್ತೆಗಳು ಭೂಕುಸಿತ, ಪ್ರವಾಹದಿಂದ ಬಂದ್ ಆಗಿದ್ದು, ಸಾರ್ವಜನಿಕ ಹಿತದೃಷ್ಟಿಯಿಂದ ಬಂದ್ ಆದ ರಸ್ತೆಗಳಿಗೆ ಬದಲಿ ವ್ಯವಸ್ಥೆ ಮಾಡಲಾಗಿತ್ತು. ಪ್ರಸ್ತುತ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕಡಿಮೆ ಆಗಿರುವದರಿಂದ ಬಹುತೇಕ ರಸ್ತೆಗಳು ಸಂಚಾರಕ್ಕೆ ಮುಕ್ತವಾಗಿದ್ದು, ಬಂದ್ ಆಗಿರುವ ರಸ್ತೆಗಳ ವಿವರ ಮತ್ತು ಬದಲಿ ಮಾರ್ಗಗಳ ವಿವರ ಕೆಳಕಂಡಂತಿದೆ.
ಮಡಿಕೇರಿ-ವೀರಾಜಪೇಟೆ ಮಾರ್ಗದ ಬದಲಿ ಮಾರ್ಗವಾಗಿ ಮಡಿಕೇರಿ-ಹಾಕತ್ತೂರು, ಮೂರ್ನಾಡು, ಕೊಂಡಂಗೇರಿ, ಹಾಲುಗುಂದ, ವೀರಾಜಪೇಟೆಗೆ ಸಂಚಾರ ಕಲ್ಪಿಸಿದೆ.
ಸಿದ್ದಾಪುರ-ಕರಡಿಗೋಡು ಮಾರ್ಗ ಬದಲು ಮೈಸೂರು ರಸ್ತೆ-ಆರೆಂಜ್ ಕೌಂಟಿ ರಸ್ತೆ, ಕರಡಿಗೋಡು ಮೂಲಕ ತೆರಳಬಹುದಾಗಿದೆ.
ಮಡಿಕೇರಿ-ವೀರಾಜಪೇಟೆ, ಮಾಕುಟ್ಟ ರಸ್ತೆ ಬಂದ್ ಆಗಿರುವ ಕಾರಣ
(ಮೊದಲ ಪುಟದಿಂದ) ಮಡಿಕೇರಿ-ಹಾಕತ್ತೂರು, ಮೂರ್ನಾಡು, ಕೊಂಡಂಗೇರಿ, ಹಾಲುಗುಂದ, ವೀರಾಜಪೇಟೆ, ಗೋಣಿಕೊಪ್ಪ, ಪೊನ್ನಂಪೇಟೆ, ಕುಟ್ಟ, ಮಾಕುಟ್ಟಕ್ಕೆ ತೆರಳಬಹುದು.
ಮೂರ್ನಾಡು-ನಾಪೋಕ್ಲು ರಸ್ತೆ ಬದಲು ಹೊದ್ದೂರು, ಬಲಮುರಿ, ಪಾರಾಣೆ, ನಾಪೋಕ್ಲುವಿಗೆ ಹೋಗಬಹುದು.
ಸಿದ್ದಾಪುರ-ಕೊಂಡಂಗೇರಿ ಮಾರ್ಗ ಬದಲು ಒಂಟಿಯಂಗಡಿ, ದೇವಣಗೇರಿ, ಹಾಲುಗುಂದ, ಕೊಂಡಂಗೇರಿ ಮೂಲಕ ಸಾಗಬಹುದು.
ಗಾಳಿಬೀಡು-ಪಾಟಿ, ಕಾಲೂರು ಮಾರ್ಗ ಬದಲು ಕೆ. ನಿಡುಗಣೆ, ಹೆಬ್ಬೆಟ್ಟಗೇರಿ, ದೇವಸ್ಥೂರು, ಕಾಲೂರು ಮೂಲಕ ಪ್ರಯಾಣಿಸಬಹುದು ಎಂದು ಅಪರ ಜಿಲ್ಲಾಧಿಕಾರಿ ಪಿ.ವಿ. ಸ್ನೇಹಾ ತಿಳಿಸಿದ್ದಾರೆ.