ಮಡಿಕೇರಿ, ಆ. 13: ಅಮ್ಮತ್ತಿ-ಕಾವಾಡಿ ನಿವಾಸಿ ಹಾಗೂ ನಿವೃತ್ತ ಯೋಧರಾಗಿರುವ ಶತಾಯುಷಿ ಮಂಡೇಪಂಡ ಎ. ಮೇದಪ್ಪ ಮತ್ತು ಪೊನ್ನವ್ವ ದಂಪತಿಯನ್ನು ಅಲ್ಲಿನ ಹಿರಿಯರ ವಿಶ್ರಾಂತಿ ಕೇಂದ್ರದ ಪರವಾಗಿ ತಾ. 11 ರಂದು ಸನ್ಮಾನಿಸಲಾಯಿತು.

ಭಾರತೀಯ ಸೇನೆಯಲ್ಲಿ ದಶಕಗಳ ಹಿಂದೆ ಸೇವೆ ಸಲ್ಲಿಸಿ ನಿವೃತ್ತ ಜೀವನದೊಂದಿಗೆ ವಿಶ್ರಾಂತಿ ಬದುಕಿನಲ್ಲಿರುವ ಮೇದಪ್ಪ (101) ಹಾಗೂ ಪತ್ನಿ ಪೊನ್ನವ್ವ (86) ಅವರುಗಳನ್ನು ಮಂಡೇಪಂಡ ಕುಟುಂಬ ಸದಸ್ಯರು, ಹಿರಿಯರ ಕೇಂದ್ರದ ಪದಾಧಿಕಾರಿಗಳು, ಕಾರ್ಮಾಡು-ಕಾವಾಡಿ ಗ್ರಾಮದ ತಕ್ಕಮುಖ್ಯಸ್ಥರು, ಊರಿನ ಹಿರಿಯರು ಒಗ್ಗೂಡಿ ಗೌರವಿಸಿದರು.

ಸೇನೆಯಿಂದ ನಿವೃತ್ತಿ ಹೊಂದಿದ ಬಳಿಕ ಕಳೆದ ಮೂರು ದಶಕಗಳಿಂದ ಅಮ್ಮತ್ತಿ ಹಿರಿಯರ ಕೇಂದ್ರದ ಸ್ಥಾಪಕ ಸದಸ್ಯರಾಗಿ ಜನ ಸೇವೆಯಲ್ಲಿ ತೊಡಗಿಸಿಕೊಂಡಿರುವ ಶತಾಯುಷಿ ಮೇದಪ್ಪ ಅವರು ಜನರಿಗೆ, ಸಾರ್ವಜನಿಕ ಹಾಗೂ ಸರಕಾರಿ ಕೆಲಸ ಕಾರ್ಯಗಳಿಗೆ ಇತರರೊಡಗೂಡಿ ನೆರವು ನೀಡುತ್ತಾ ಬಂದಿದ್ದಾರೆ.

ಕೊಡಗಿನ ಹಿರಿಯ ಸಹಕಾರಿ ಪಂದ್ಯಂಡ ಬೆಳ್ಯಪ್ಪ ಅವರ ಸ್ಮರಣೆಯಲ್ಲಿ ಅನೇಕ ಚಟುವಟಿಕೆಯೊಂದಿಗೆ ಅಮ್ಮತ್ತಿ ಕೊಡವ ಸಮಾಜದ ಅತಿಥಿ ಗೃಹ ನಿರ್ಮಾಣ ಹಾಗೂ ಇತರ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪ್ರಸಕ್ತ ಮಾತನಾಡುವ ಬದಲಿಗೆ ಮೌನವಾಗಿ ತಮ್ಮ ಕೈಲಾಗುವ ಸೇವೆಯೊಂದಿಗೆ, ಈ ಶತಾಯುಷಿ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ. ಗ್ರಾಮದ ಹಿರಿಯ ಕುಟ್ಟಂಡ ಎನ್. ಚಿಣ್ಣಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನೆಲ್ಲಮಕ್ಕಡ ಶಂಭು ಸೋಮಯ್ಯ, ಮಾಚಿಮಂಡ ಸುರೇಶ್ ಅಯ್ಯಪ್ಪ ಹಾಗೂ ಇತರರು ಪಾಲ್ಗೊಂಡಿದ್ದರು.