ಶ್ರೀಮಂಗಲ, ಆ. 13: ಶ್ರೀಮಂಗಲ ವ್ಯಾಪ್ತಿಯಲ್ಲಿ ಸತತ ಎರಡೂ ವರ್ಷ ಮಹಾಮಳೆಯಿಂದ ಇಲ್ಲಿನ ಪ್ರಮುಖ ಬೆಳೆಗಳು ನಷ್ಟವಾಗಿದೆ. ಇದರ ದುಷ್ಪರಿಣಾಮ ವ್ಯಾಪಾರೋದÀ್ಯಮದ ಮೇಲೂ ಉಂಟಾಗಿದೆ. ಆದ್ದರಿಂದ ಮರ್ಚೆಂಟ್ ಬ್ಯಾಂಕಿನಲ್ಲಿ ವ್ಯಾಪಾರಕ್ಕಾಗಿ ಪಡೆದ ಸಾಲವನ್ನು ವ್ಯಾಪಾರಿಗಳು ಸಕಾಲದಲ್ಲಿ ಕಟ್ಟಲು ಸಾಧ್ಯವಾಗದೆ ಸುಸ್ತಿದಾರರಾಗಿದ್ದು, ವ್ಯಾಪಾರಿಗಳ ಎಲ್ಲಾ ಪಿಗ್ಮಿ ಸಾಲವನ್ನು ಮನ್ನಾ ಮಾಡಬೇಕೆಂದು ಶ್ರೀಮಂಗಲ ಚೇಂಬರ್ ಆಫ್ ಕಾಮರ್ಸ್ನ ಮಾಜಿ ಅಧ್ಯಕ್ಷ ಹಾಗೂ ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಅಜ್ಜಮಾಡ ಕಟ್ಟಿ ಮಂದಯ್ಯ ಒತ್ತಾಯಿಸಿದ್ದಾರೆ.
ಶ್ರೀಮಂಗಲ ಗ್ರಾ.ಪಂ. ಸಭಾಂಗಣದಲ್ಲಿ ನಡೆದ ಶ್ರೀಮಂಗಲ ಚೇಂಬರ್ ಆಫ್ ಕಾಮರ್ಸ್ ಮಹಾಸಭೆಯಲ್ಲಿ ಅವರು ಮಾತನಾಡಿದರು. ಶ್ರೀಮಂಗಲದಲ್ಲಿ ಚೇಂಬರ್ನ ನಿವೇಶನವಿದ್ದು, ಇದರ ದಾಖಲಾತಿ ಸರಿಯಾದ ಮೇಲೆ ನೂತನ ಕಟ್ಟಡ ಕಟ್ಟಲು ಜಿಲ್ಲಾ ಸಮಿತಿ ಹಾಗೂ ರಾಜ್ಯ ಸಮಿತಿ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಶ್ರೀಮಂಗಲ ಚೇಂಬರ್ ಆಫ್ ಕಾಮರ್ಸ್ನ ಅಧಕ್ಷ ಮಾಣೀರ ಮುತ್ತಪ್ಪ ಅವರು ಮಾತನಾಡಿ ಕೃಷಿ ಮತ್ತು ಕಾಫಿ ಬೆಳೆಯನ್ನು ಅವಲಂಬಿಸಿ ಕೊಡಗು ಜಿಲ್ಲೆಯಲ್ಲಿ ವ್ಯಾಪಾರೋಧ್ಯಮ ನಡೆಯುತ್ತಿದೆ. ಕಾಫಿ, ಕರಿಮೆಣಸು ಬೆಲೆ ಕುಸಿತದಿಂದ ಜಿಲ್ಲೆಯ ಆರ್ಥಿಕ ಪರಿಸ್ಥಿತಿ ಸಂಕಷ್ಟದಲ್ಲಿದೆ. ವ್ಯಾಪಾರಿಗಳಿಗೆ ಮಳಿಗೆಯ ಬಾಡಿಗೆ ಪಾವತಿಸುವಷ್ಟು ಸಹ ವ್ಯಾಪಾರವಾಗುತ್ತಿಲ್ಲ. ಹೀಗಿರುವಾಗ ವ್ಯಾಪಾರವನ್ನೇ ನಂಬಿ ಸಾಲ ಪಡೆದಿರುವವರು ಮರು ಪಾವತಿಸಲು ಕಷ್ಟವಾಗುತ್ತಿದೆ. ಜಿಲ್ಲೆಯಲ್ಲಿ ಅದರಲ್ಲೂ ಶ್ರೀಮಂಗಲದಲ್ಲಿ ವ್ಯಾಪಾರೋದ್ಯಮಿಗಳು ತೀವ್ರ ನಷ್ಟದಲ್ಲಿದ್ದಾರೆ. ಆದ್ದರಿಂದ ವಿಶೇಷ ಪ್ರಕರಣ ಎಂದು ಪರಿಗಣಿಸಿ ವ್ಯಾಪಾರಿಗಳು ಬ್ಯಾಂಕಿನಲ್ಲಿ ಪಡೆದಿರುವ ಪಿಗ್ಮಿ ಸಾಲಗಳನ್ನು ಮನ್ನಾ ಮಾಡಬೇಕೆಂದು ಒತ್ತಾಯಿಸಿದರು.
ವ್ಯಾಪಾರೋದÀ್ಯಮಿ ತಮ್ಮು ಮುತ್ತಣ್ಣ ಮಾತನಾಡಿ, ಮರ್ಚೆಂಟ್ ಬ್ಯಾಂಕಿನಲ್ಲಿ ಸಾಲ ಪಡೆಯಲು ಜಾಮೀನು ನೀಡಿದವರ ಮೇಲೆ ಬ್ಯಾಂಕಿನವರು ಸಾಲ ಮರುಪಾವತಿಗೆ ತೀವ್ರ ಒತ್ತಡ ಹೇರುತ್ತಿರುವದು ಸರಿಯಲ್ಲ ಎಂದು ಹೇಳಿದರು.
ಚೋನಿರ ಹರೀನ್ ಮಾತನಾಡಿ ಮರ್ಚೆಂಟ್ ಬ್ಯಾಂಕಿನಲ್ಲಿ ವ್ಯಾಪಾರಕ್ಕೆ ಸಾಲ ತೆಗೆಯುತ್ತೇವೆ. ಆದರೆ ಅಲ್ಲಿ ತೋಟ ಗದ್ದೆಯ ದಾಖಲಾತಿ ಕೇಳುತ್ತಾರೆ. ದಾಖಲಾತಿ ನೀಡಿ ಸಾಲ ಪಡೆಯುವದಾದರೆ ಬೇರೆ ಬ್ಯಾಂಕಿನಲ್ಲಿಯೂ ಕಡಿಮೆ ಬಡ್ಡಿದರಕ್ಕೆ ದೊರೆಯುತ್ತದೆ. ವ್ಯಾಪಾರದ ಮೇಲೆ ಮಾತ್ರ ಸಾಲ ನೀಡಲು ನಿಯಮವನ್ನು ಸರಳೀಕರಣಗೊಳಿಸುವಂತೆ ಒತ್ತಾಯಿಸಿದರು. ಮುರುಳಿ ಮಾತನಾಡಿ ಶ್ರೀಮಂಗಲ ಚೇಂಬರ್ ಬ್ಯಾಂಕಿನವರು ಸಾಲ ಮರುಪಾವತಿಸಿದೇ ಇರುವವರು ಅವರಿಗೆ ಜಾಮೀನು ನೀಡಿದವರ ಮೇಲೆ ನ್ಯಾಯಾಲಯದಲ್ಲಿ ಕೇಸು ಹಾಕಿದ್ದು, ಇದನ್ನು ವಾಪಾಸ್ಸು ಪಡೆಯಬೇಕೆಂದು ಒತ್ತಾಯಿಸಿದರು.
ಶ್ರೀಮಂಗಲ ಚೇಂಬರ್ ಆಫ್ ಕಾಮರ್ಸ್ನ ಕಾರ್ಯದರ್ಶಿ ಚೋನಿರ ಕಾಳಯ್ಯ ಅವರು ಮಾತನಾಡಿ ಚೇಂಬರ್ ಬ್ಯಾಂಕಿನಿಂದ ಸಾಲ ಪಡೆದ ಸಾಲಗಾರ ಒಂದು ವೇಳೆ ತೀರಿಕೊಂಡ ಸಂದರ್ಭದಲ್ಲಿ ಜಾಮೀನುದಾರರಿಂದ ವಸೂಲಾತಿ ಮಾಡುವ ಬದಲು ಆಯಾ ಬ್ಯಾಂಕಿನಲ್ಲಿ ವಿಮೆ ಮೂಲಕ ಬ್ಯಾಂಕ್ ಪಾವತಿಸಿಕೊಳ್ಳುವ ವ್ಯವಸ್ಥೆ ಮಾಡಿಕೊಳ್ಳಬೇಕಾಗಿದೆ ಎಂದು ಸಲಹೆ ನೀಡಿದರು.
ರಾಜ್ಯ ಚೇಂಬರ್ ಆಫ್ ಕಾಮರ್ಸ್ನ ಸಮಿತಿ ನಿರ್ದೇಶಕ ಕಾಡ್ಯಮಾಡ ಗಿರೀಶ್ ಗಣಪತಿ ಮಾತನಾಡಿ ಜಿಲ್ಲೆಯ ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದು, ಬ್ಯಾಂಕಿನವರು ಸಾಲ ಕಟ್ಟಲು ಒತ್ತಾಯಿಸುತ್ತಿರುವ ಬಗ್ಗೆ ಜಿಲ್ಲಾ ಲೀಡ್ ಬ್ಯಾಂಕ್ಗೆ ಮನವಿ ಸಲ್ಲಿಸಿ ಒತ್ತಾಯ ಮಾಡದಂತೆ ಮನವರಿಕೆ ಮಾಡಬೇಕಾಗಿದೆ. ಈ ಬಗ್ಗೆ ಶಾಸಕ ಕೆ.ಜಿ. ಬೋಪಯ್ಯ ಅವರ ಮೂಲಕ ಲೀಡ್ ಬ್ಯಾಂಕ್ಗೆ ಮನವರಿಕೆ ಮಾಡಲಾಗುವದು. ವರ್ತಕರ ಸಾಲ ಮನ್ನಾ ಮಾಡಿರುವ ಪ್ರಕರಣ ಇದುವರೆಗೆ ಆಗಿಲ್ಲ. ಈ ಬಗ್ಗೆ ರಾಜ್ಯ ಸಮಿತಿಗೆ ಲಿಖಿತ ಪತ್ರ ನೀಡಿ ಅದನ್ನು ಮುಖ್ಯಮಂತ್ರಿಗಳ ಗಮನಕ್ಕೆ ಶಾಸಕರ ಸಹಕಾರದೊಂದಿಗೆ ತರಲಾಗುವದು. ಶ್ರೀಮಂಗಲದಲ್ಲಿ ಚೇಂಬರ್ ಕಚೇರಿ ನಿರ್ಮಾಣಕ್ಕೆ ಶಾಸಕರ ಗಮನ ಸೆಳೆದು ಆರ್ಥಿಕ ನೆರವು ನೀಡಲು ಪ್ರಯತ್ನಿಸಲಾಗುವದು ಎಂದು ಹೇಳಿದರು.
ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಿ.ಎನ್. ಪ್ರಕಾಶ್ ಮಾತನಾಡಿ ಜಿಲ್ಲೆಯ ವರ್ತಕರ ಬೇಕು ಬೇಡಿಕೆಗಳ ಬಗ್ಗೆ ಈ ಹಿಂದೆ ಇಂದಿನ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗಿದೆ. ವರ್ತಕರ ಹಿತ ಕಾಪಾಡುವ ನಿಟ್ಟಿನಲ್ಲಿ ಸಮಿತಿಯಿಂದ ಪ್ರಯೋಜನವಾಗಬೇಕು. ರಾಜ್ಯದ ನಿರ್ದೇಶಕರ ಮುಖಾಂತರ ಜಿಲ್ಲೆಯ ವರ್ತಕರ ಸಮಸ್ಯೆ ಪರಿಹರಿಸಲು ಕಾರ್ಯ ನಿರ್ವಹಿಸಲಾಗುವದು.
ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ನ ಕಾರ್ಯದರ್ಶಿ ಕೇಶವ್ ಕಾಮತ್ ಅವರು ಮಾತನಾಡಿ 10-15 ವರ್ಷಕ್ಕೆ ಹೋಲಿಸಿದರೆ ಜಿಲ್ಲೆಯಲ್ಲಿ ವರ್ತಕರ ಸಂಘಟನೆ ಬೆಳೆದಿದೆ. ಸಂಘಟನೆ ಚೆನ್ನಾಗಿದ್ದಷ್ಟು ಸಂಘ ಬಲವಿರುತ್ತದೆ. ಸಾಲ ಪಡೆದವರಷ್ಟೇ ಜಾಮೀನು ನೀಡಿದವರು ಸಹ ಸಾಲ ಮರುಪಾವತಿಸಲು ಜವಾಬ್ದಾರರಾಗಿದ್ದು, ಇದು ಎಲ್ಲಾ ಬ್ಯಾಂಕಿನಲ್ಲಿರುವ ನಿಯಮ ಎಂದು ಹೇಳಿದರು.