ಮಡಿಕೇರಿ, ಆ. 12: ಕೊಡಗು ಜಿಲ್ಲೆಯಲ್ಲಿ ಕಳೆದ ಹತ್ತು ದಿನಗಳಿಂದ ಸುರಿಯುತ್ತಿರುವ ಆಶ್ಲೇಷ ಮಳೆಯಿಂದ ಗ್ರಾಮೀಣ ಜನತೆ ಅಲ್ಲಲ್ಲಿ ಪ್ರವಾಹದೊಂದಿಗೆ ರಸ್ತೆ ಸಂಪರ್ಕ ಕಡಿತಗೊಂಡು, ದೂರವಾಣಿ, ವಿದ್ಯುತ್, ಸಾರಿಗೆ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಆರೆಂಟು ದಿನಗಳಿಂದ ವಿದ್ಯುತ್ ಇಲ್ಲದ ಪರಿಣಾಮವಾಗಿ ಮೊಬೈಲ್ ಸಹಿತ ಎಲ್ಲ ಎಲೆಕ್ಟ್ರಾನಿಕ್ ಉಪಕರಣಗಳು ಸ್ತಬ್ಧಗೊಂಡಿವೆ.

ಹೀಗಾಗಿ ದೈನಂದಿನ ಬದುಕಿನೊಂದಿಗೆ ತ್ರಿಶಂಕು ಸ್ಥಿತಿಯಲ್ಲಿರುವ ಜನತೆ, ತಮ್ಮ ಅಳಲು ತೋಡಿಕೊಳ್ಳಲು ಕೂಡ ಮಾರ್ಗೋಪಾಯವಿಲ್ಲದೆ ಪರಿತಪಿಸುತ್ತಿದ್ದಾರೆ. ಮಡಿಕೇರಿ ತಾಲೂಕಿನ ಕಕ್ಕಬೆ, ನಾಲಡಿ, ಪಾಡಿ, ನೆಲಜಿ, ಪೇರೂರು, ಬಲ್ಲಮಾವಟಿ ಜನತೆ ದ್ವೀಪದಲ್ಲಿ ಸಿಲುಕಿಕೊಂಡಂತಾಗಿದೆ.

ತುಂಬಿ ಹರಿಯುತ್ತಿರುವ ನದಿ - ತೊರೆಗಳ ಪ್ರವಾಹ ನಡುವೆ ನಾಲಡಿ ಗ್ರಾಮದ ಹಾಲೆಹೊಳೆ ಮಾರ್ಗ ಹಾನಿಗೊಂಡಿದೆ. ಭಾಗದಲ್ಲಿ ನೆಲೆಸಿರುವ ಅನೇಕ ಕುಟುಂಬಗಳು ಮನೆಗಳಿಂದ ಹೊರಬಾರದೆ ನಿತ್ಯ ಜೀವನಕ್ಕೂ ತೊಂದರೆಯಲ್ಲಿ ಸಿಲುಕಿಕೊಂಡಿದ್ದಾರೆ. ವರುಣನ ಆರ್ಭಟದಿಂದ ರಸ್ತೆ ಸಂಪರ್ಕ ಕಡಿಡಿಗೊಂಡು ರಾತ್ರಿ ಕತ್ತಲೆಯಲ್ಲಿ ಕಳೆಯುತ್ತಿದ್ದಾರೆ. ಹಗಲು ಕೂಡ ಮೊಬೈಲ್ ಇತ್ಯಾದಿ ಸ್ತಬ್ಧಗೊಂಡಿರುವ ಅಮ್ಮತ್ತಿ ವ್ಯಾಪ್ತಿಯ ಕಣ್ಣಂಗಾಲ, ಒಂಟಿಯಂಗಡಿ, ಪಚ್ಚಾಟ್, ಹಚ್ಚಿನಾಡು ವ್ಯಾಪ್ತಿಯಲ್ಲಿ ಮಳೆ ಪ್ರವಾಹದೊಂದಿಗೆ ಕಾವೇರಿ ನದಿ ಪಾತ್ರದ ಹತ್ತಾರು ಕುಟುಂಬಗಳು ಕಳೆದ 12 ದಿನಗಳಿಂದ ಕತ್ತಲೆಯಲ್ಲಿ ಕಳೆಯುವಂತಾಗಿದೆ ಎಂದು ಗ್ರಾಮಸ್ಥರ ಪರವಾಗಿ ವಕೀಲ ಬಿ. ಸೂರಜ್ ಮುತ್ತಣ್ಣ ಅಸಹಾಯಕತೆ ತೋಡಿಕೊಂಡಿದ್ದಾರೆ.

ಉತ್ತರ ಕೊಡಗಿನ ಗರ್ವಾಲೆ, ಸೂರ್ಲಬ್ಬಿ, ಮುಟ್ಲು, ಹಚ್ಚಿನಾಡು, ಕುಂಬಾರಗಡಿಗೆ, ಕಿಕ್ಕರಳ್ಳಿ, ಮಂಕ್ಯ ವ್ಯಾಪ್ತಿಯಲ್ಲಿ ಹಲವರ ಮನೆಗಳಿಗೆ ಹಾನಿಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡು ಭತ್ತದ ನಾಟಿಯಾಗಿರುವ ಗದ್ದೆಗಳು ಜಲಾವೃತಗೊಂಡಿದೆ ಎಂದು ಗ್ರಾಮಸ್ಥರು ಅಳಲು ವ್ಯಕ್ತಪಡಿಸಿದ್ದಾರೆ. ಅಲ್ಲಿನ ಸೂರ್ಲಬ್ಬಿ ನಿವಾಸಿ ಪಾರ್ವತಿ ಸೋಮಯ್ಯ ತಮ್ಮ ವಾಸದ ಮನೆಗೂ ಹಾನಿಯಾಗಿದೆ ಎಂದು ತಿಳಿಸಿದ್ದಾರೆ.

ಗ್ರಾಮೀಣ ಪ್ರದೇಶಗಳಲ್ಲಿ 15 ದಿನಗಳಿಂದ ವಿದ್ಯುತ್ ಸಂಪರ್ಕವಿಲ್ಲದೆ ಜನರು ಕತ್ತಲೆಯಲ್ಲಿದ್ದು, ಮೊಬೈಲ್ ಇತ್ಯಾದಿ ಸ್ತಬ್ಧಗೊಂಡಿದೆ ಎಂದು ತಿಳಿಸಿರುವ ಅವರು, ಬಸ್ ಸೌಕರ್ಯ ಕೂಡ ಇಲ್ಲದೆ ಜನರಿಗೆ ತೀವ್ರ ತೊಂದರೆ ಉಂಟಾಗಿದೆ ಎಂದು ಕುಶಾಲನಗರದ ಬಂಧುವೊಬ್ಬರ ಮನೆಯಿಂದ ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ.

ದಕ್ಷಿಣ ಕೊಡಗಿನ ಬಿರುನಾಣಿಯಲ್ಲಿ ಕಳಕಂಡ ಶಶಿ ಎಂಬವರ ಮನೆ ಬಳಿ ಭೂಕುಸಿತದೊಂದಿಗೆÉ, ಬಾಡಗರಕೇರಿ ಮೃತ್ಯುಂಜಯ ದೇವಾಲಯಕ್ಕೆ ತೆರಳುವ ರಸ್ತೆಯಲ್ಲಿ ಕುಸಿತದಿಂದ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿರುವ ದೃಶ್ಯ ಕಂಡು ಬಂದಿದೆ.

ಮಡಿಕೇರಿಯಿಂದ ಗಾಳಿಬೀಡು, ಹಟ್ಟಿಹೊಳೆ ಮುಖಾಂತರ ತೆರಳುವ ಗ್ರಾಮೀಣ ಪ್ರದೇಶಗಳ ಸಂಪರ್ಕ ರಸ್ತೆಗಳಲ್ಲಿ ಮಣ್ಣು ಕುಸಿತದಿಂದ ಆ ಭಾಗದ ಜನತೆ ತೊಂದರೆಗೆ ಸಿಲುಕುವಂತಾಗಿದೆ.

ಮಂಗಳೂರು ಹೆದ್ದಾರಿಯ ಜೋಡುಪಾಲ ಮತ್ತಿತರ ಕಡೆಗಳಲ್ಲಿಯೂ ಭೂ ಕುಸಿತದಿಂದ ಗ್ರಾಮೀಣ ಪ್ರದೇಶಗಳ ಜನರು ಬವಣೆ ಎದುರಿಸುವಂತಾಗಿದೆ.

ಕಡಿಮೆಯಾದ ವರುಣ

ನಾಪೆÇೀಕ್ಲು : ನಾಪೆÇೀಕ್ಲು ವ್ಯಾಪ್ತಿಯಲ್ಲಿ ವರುಣನ ಆರ್ಭಟ ಕಡಿಮೆಯಾಗಿದ್ದು, ನಾಪೆÇೀಕ್ಲು - ಮೂರ್ನಾಡು ರಸ್ತೆಯ ಬೊಳಿಬಾಣೆಯಲ್ಲಿ ಕಾವೇರಿ ನದಿ ಪ್ರವಾಹದಿಂದ ರಸ್ತೆ ತಡೆ ಉಂಟಾಗಿರುವದು ಹೊರತುಪಡಿಸಿ ಎಲ್ಲಾ ಕಡೆಗಳಲ್ಲಿ ಸಂಚಾರ ಆರಂಭಗೊಂಡಿದೆ.

ಕಳೆದ 24 ಗಂಟೆಗಳಲ್ಲಿ ಈ ವ್ಯಾಪ್ತಿಯಲ್ಲಿ ಯಾವದೇ ಅಹಿತಕರ ಘಟನೆ, ಕಷ್ಟ-ನಷ್ಟ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ.

150 ಮನೆ ಕುಸಿತ: ನಾಪೆÇೀಕ್ಲು ಹೋಬಳಿ ವ್ಯಾಪ್ತಿಯಲ್ಲಿ ಸುಮಾರು 150 ಮನೆಗಳು ಸಂಪೂರ್ಣವಾಗಿ ಕುಸಿತಗೊಂಡಿದ್ದು, ಉಳಿದಂತೆ ಭಾಗಶಃ ಕುಸಿತಗೊಂಡಿದೆ. ಅದರಂತೆ ಬರೆ ಕುಸಿತ, ಭತ್ತದ ಗದ್ದೆ, ಕಾಫಿ ತೋಟಗಳಿಗೆ ಹಾನಿ ಸೇರಿದಂತೆ ಹೆಚ್ಚಿನ ಪ್ರಮಾಣದಲ್ಲಿ ನಷ್ಟ ಸಂಭವಿಸಿದ್ದು, ಈ ಬಗ್ಗೆ ಖಚಿತವಾದ ಮಾಹಿತಿ ಲಭಿಸಬೇಕಾಗಿದೆ ಎಂದು ನಾಪೆÇೀಕ್ಲು ಹೋಬಳಿ ಕಂದಾಯ ಪರಿವೀಕ್ಷಕ ರಾಮಯ್ಯ ‘ಶಕ್ತಿ’ಗೆ ತಿಳಿಸಿದ್ದಾರೆ.

ಕತ್ತಲೆಯಲ್ಲಿ ನಾಪೆÇೀಕ್ಲು: ಕಳೆದ 6 ದಿನಗಳಿಂದ ನಾಪೆÇೀಕ್ಲು ವ್ಯಾಪ್ತಿಯಲ್ಲಿ ವಿದ್ಯುತ್ ಇಲ್ಲದೆ ಕತ್ತಲು ಆವರಿಸಿಕೊಂಡಿದೆ. ಎಲ್ಲಿ ಹೋದರೂ ಮರದ ಕೊಂಬೆ ಬಿದ್ದು, ಮರ ಬಿದ್ದು ವಿದ್ಯುತ್ ಕಂಬಗಳು, ತಂತಿಗಳು ರಸ್ತೆಯಲ್ಲಿ ಬಿದ್ದಿರುವದು ಕಂಡುಬರುತ್ತಿದೆ. ಈ ಬಗ್ಗೆ ಮಡಿಕೇರಿ ಕಾರ್ಯಪಾಲಕ ಅಭಿಯಂತರರನ್ನು ‘ಶಕ್ತಿ’ ಸಂಪರ್ಕಿಸಿದಾಗ ನಾಪೆÇೀಕ್ಲು ವ್ಯಾಪ್ತಿಯಲ್ಲಿ ಸುಮಾರು 80ರಿಂದ 100 ವಿದ್ಯುತ್ ಕಂಬಗಳು ಮುರಿದು ಬಿದ್ದಿದೆ. 20ರಿಂದ 30 ಟ್ರಾನ್ಸ್‍ಫಾರ್ಮರ್‍ಗಳು ಹಾಳಾಗಿವೆ. 10ರಿಂದ 15 ಟ್ರಾನ್ಸ್‍ಫಾರ್ಮರ್‍ಗಳು ಇನ್ನೂ ನೀರಿನಲ್ಲಿ ಮುಳುಗಿವೆ. ಪ್ರವಾಹ ಕಡಿಮೆಯಾದ ನಂತರ ಮಾತ್ರ ಪೂರ್ತಿ ಚಿತ್ರಣ ಲಭಿಸಲಿದೆ ಎಂದರು.

ಮಳೆಯ ಕಾರಣದಿಂದ ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆಲಜಿ ಗ್ರಾಮದ ಬಾಳೆಯಡ ರಾಜಾ ಕುಂಞಪ್ಪ ಅವರ ಕಾಫಿ ತೋಟ ಕುಸಿದು ಬಿದ್ದ ಹಿನ್ನೆಲೆಯಲ್ಲಿ ಕೆಳಗೆ ಹರಿಯುತ್ತಿದ್ದ ಕೊಲ್ಲಿ ಸಂಪೂರ್ಣವಾಗಿ ಮುಚ್ಚಿಹೋಗಿದ್ದು, ಸಮೀಪದಲ್ಲಿದ್ದ ಅವರದೇ 2 ಎಕರೆ ಕಾಫಿ ತೋಟ, ಅಡಿಕೆ, ಕಾಳುಮೆಣಸು ಫಸಲು ನೀರಿನಲ್ಲಿ ಆವೃತಗೊಂಡಿದೆ.

ನಾಪೆÇೀಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳೇ ತಾಲೂಕುವಿನ ನೂರಂಬಡ ಉದಯಶಂಕರ್ ಎಂಬವರ ಮನೆ ಹಿಂಬಾಗದಲ್ಲಿ ಸುಮಾರು 100 ಅಡಿಗಳಷ್ಟು ದೂರದಿಂದ ಬರೆ ಕುಸಿತಗೊಂಡು ಮನೆ ಗೋಡೆಗೆ ನಷ್ಟ ಸಂಭವಿಸಿದೆ.

ಗದ್ದೆಗೆ ಮಣ್ಣು : ಬೆಟ್ಟಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಲೂರು ಗ್ರಾಮದಲ್ಲಿ ಬಿ.ಟಿ. ಕಾಳಪ್ಪ ಅವರ ಮನೆ ಹಿಂಬಾಗದಲ್ಲಿ ಬರೆ ಕುಸಿತ ಉಂಟಾಗಿ ಅವರು ಸಾಕಿದ ಕೋಳಿಗಳು ಮಣ್ಣಿನಡಿ ಸಿಲುಕಿ ಸಾವನ್ನಪ್ಪಿದೆ.

ಭತ್ತದ ಗದ್ದೆಗಳು ಸಂಪೂರ್ಣವಾಗಿ ನೀರಿನಿಂದ ಆವೃತ್ತವಾಗಿತ್ತು. ಮೇಲಿನ ಕೆರೆ ನೀರಿನ ರಭಸದಿಂದ ಒಡೆಯುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಗದ್ದೆಯಲ್ಲಿ ಅದನ್ನು ನಿಂತು ವೀಕ್ಷಿಸುತ್ತಿದ್ದೆ. ಆದರೆ ನಾನು ಅಂದುಕೊಂಡಿದ್ದೇ ಬೇರೆ. ನನ್ನ ಮನೆ ಕಡೆಯಿಂದ 25 ಕಾಫಿ ಗಿಡಗಳು, ಒಂದು ಮಾವಿನ ಮರ, ಬಟರ್ ಫ್ರೂಟ್ ಮರ, ಅದರ ಬುಡದಲ್ಲಿದ್ದ ಸೌದೆಗಳು ಸೇರಿ ಸುಮಾರು ಕಾಲು ಎಕರೆ ಜಾಗವನ್ನು ಯಾರೋ ಬಳ್ಳಿಯಲ್ಲಿ ಎಳೆದುಕೊಂಡು ಗದ್ದೆಗೆ ಬಂದಂತೆ ಕಂಡು ಬಂತು. ನನ್ನ ಸುಮಾರು ಗದ್ದೆಗಳು ಈ ಮಣ್ಣಿನಿಂದ ಆವೃತವಾಗಿದೆ ಎಂದು ತಮ್ಮ ಅನುಭವವನ್ನು ಕಾಳಪ್ಪ ಹಂಚಿಕೊಂಡಿದ್ದಾರೆ.

ಕÀಣಿವೆ ತೂಗು ಸೇತುವೆ ರಿಪೇರಿ ಭರವಸೆ

ಕೂಡಿಗೆ : ಕಣಿವೆಯ ಶ್ರೀ ರಾಮಲಿಂಗೇಶ್ವರ ದೇವಾಲಯದ ಮುಂಭಾಗದಲಿ ತೂಗು ಸೇತುವೆಯು ಮುರಿದು ಹೋಗಿದೆ.

ಈ ತೂಗು ಸೇತುವೆಯು ಸಾವಿರಾರು ಜನ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ 13 ಗ್ರಾಮಗಳ ಸಂಪರ್ಕ ಸೇತುವೆಯಾಗಿದ್ದು, ಅತಿಯಾದ ನೀರಿನ ಹರಿಯುವಿಕೆಯಿಂದ ಈ ಸಂಪರ್ಕ ತೂಗು ಸೇತುವೆಯು ಹಾನಿಯಾಗಿ ಎರಡು ಭಾಗಗಳಲ್ಲಿಯೂ ಮುರಿದು ಹೋಗಿದ್ದು, ಸಂಪರ್ಕ ಕಡಿತಗೊಂಡಿದೆ. ಕಳೆದ ಬಾರಿ ಕುಸಿದ ಸೇತುವೆಯನ್ನು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರು ತುರ್ತು ಅವಶ್ಯಕತೆಯನ್ನು ಅರಿತು ಒಂದು ವಾರದಲ್ಲಿ ದುರಸ್ತಿಗೊಳಿಸಿ, ಸಂಪರ್ಕ ವ್ಯವಸ್ಥೆ ಒದಗಿಸಿದ್ದರು.

ಅದೇ ರೀತಿಯೂ ಈ ಭಾರಿಯೂ ಪ್ರಕೃತಿ ವಿಕೋಪದಲ್ಲಿ ನೀರು ಹೆಚ್ಚಾಗಿ ಎರಡೂ ಭಾಗಗಳಲ್ಲಿ ಕಬ್ಬಿಣದ ಸಲಾಕೆಗಳು ಮುರಿದು, ಸೇತುವೆಗೆ ಅಳವಡಿಸಿದ್ದ ಕಬ್ಬಿಣದ ಮೆಟ್ಟಿಲುಗಳು ನೀರಿನಲ್ಲಿ ಕೊಚ್ಚಿ ಹೋಗಿವೆ.

ಈ ಬಗ್ಗೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು ತೂಗು ಸೇತುವೆಯನ್ನು ಪರಿಶೀಲಿಸಿ, ಶೀಘ್ರವಾಗಿ ಕ್ರಮಕೈಗೊಳ್ಳುವದಾಗಿ ತಿಳಿಸಿದ್ದಾರೆ. ಜಲಾವೃತಗೊಂಡ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭ ಮಾತನಾಡಿದ ಅವರು, ನದಿ ನೀರಿನ ಮಟ್ಟ ಕಡಿಮೆಯಾದ ತಕ್ಷಣ ಸಂಬಂಧಪಟ್ಟ ತಜ್ಞ ಇಂಜಿನಿಯರ್‍ಗಳಿಂದ ಪರೀಕ್ಷಿಸಿ, ಉತ್ತಮವಾದ ರೀತಿಯಲ್ಲಿ ಸರಿಪಡಿಸಲಾಗುವದು. ಅತಿ ಮುಖ್ಯವಾಗಿರುವ ಸಂಪರ್ಕ ಸೇತುವೆಯು ಇದಾಗಿದ್ದು, ಶೀಘ್ರದಲ್ಲೆ ದುರಸ್ತಿಗೆ ಕ್ರಮಕೈಗೊಳ್ಳಲಾಗುವದು ಎಂದು ತಿಳಿಸಿದ್ದಾರೆ.

ಸಿದ್ದಾಪುರ ವರದಿ : ಕರಡಿಗೋಡು, ಗುಹ್ಯ, ಕಕ್ಕಟ್ಟುಕಾಡು, ನೆಲ್ಲಿಹುದಿಕೇರಿ, ವಾಲ್ನೂರು, ತ್ಯಾಗತ್ತೂರು, ಮುಂತಾದೆಡೆಗಳಲ್ಲಿ ಪ್ರವಾಹದಿಂದ ಹಾನಿಗೊಂಡಿರುವ ಮನೆಗಳು ಹಾಗೂ ಆಸ್ತಿಪಾಸ್ತಿ ನಷ್ಟದ ಕುರಿತು ಕಂದಾಯ ಅಧಿಕಾರಿಗಳು ವರದಿ ಸಂಗ್ರಹಿಸುತ್ತಿದ್ದಾರೆ.

ಹಾನಿಗೊಳಗಾದ ಮನೆಗಳಿಗೆ ತೆರಳಿ ಅಧಿಕಾರಿಗಳು ಖದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲದೆ, ಅಂಕಿ ಅಂಶಗಳನ್ನು ಪಟ್ಟಿ ಮಾಡುತ್ತಿದ್ದಾರೆ. ನದಿದಡದಲ್ಲಿರುವ ಎಲ್ಲಾ ಮನೆಗಳ ಒಳಗೆ ನದಿಯ ನೀರು ನುಗ್ಗಿದ ಪರಿಣಾಮ ಹಾಗೂ ನೀರಿನ ಹೊಡೆತಕ್ಕೆ ನದಿದಡ ಕುಸಿಯುತ್ತಿದ್ದು, ನಿವಾಸಿಗಳು ಮತ್ತಷ್ಟು ಭಯಭೀತರಾಗಿದ್ದಾರೆ.

ಮನೆಯೊಳಗೆ ಹಾವುಗಳ ಉಪಟಳ !

ಪ್ರವಾಹದಿಂದಾಗಿ ನದಿಯ ನೀರು ಮನೆಗಳಿಗೆ ರಭಸದಿಂದ ನುಗ್ಗಿದ ಪರಿಣಾಮ ಕೂಡುಗದ್ದೆಯ ವ್ಯಾಪ್ತಿಯ ಕೆಲವು ಮನೆಗಳ ಒಳಗೆ ಕೆಲವು ಹಾವುಗಳು ಹಾಗೂ ಹಾವು ಮರಿಗಳು ಕಂಡುಬಂದಿದ್ದು, ನಿವಾಸಿಗಳು ಆತಂಕಕ್ಕೆ ಸಿಲುಕಿಕೊಂಡಿದ್ದಾರೆ. ನದಿದಡದ ಎಲ್ಲಾ ಮನೆಗಳು ಒಳಗೆ ಕೆಸರು ತುಂಬಿದ್ದು, ಸ್ವಚ್ಛ ಮಾಡಲು ನಿವಾಸಿಗಳು ಶ್ರಮಪಡುತ್ತಿರುವ ದೃಶ್ಯ ಕಂಡು ಬಂದಿತ್ತು.

-ಪಿ.ವಿ.ಪ್ರಭಾಕರ್, ವಾಸು, ನಾಗರಾಜ ಶೆಟ್ಟಿ