ಸೋಮವಾರಪೇಟೆ,ಆ.12: ತಾಲೂಕಿನ ಗರಗಂದೂರು ಹೊಳೆಯಲ್ಲಿ ಟ್ರಕ್‍ಗಟ್ಟಲೆ ಮರ ಹಾಗೂ ಪ್ಲಾಸ್ಟಿಕ್-ಬಟ್ಟೆ ತ್ಯಾಜ್ಯಗಳು ಶೇಖರಣೆಗೊಂಡಿದ್ದು, ಮರದ ಆಸೆಗಾಗಿ ಯಾರೂ ಸಹ ಹೊಳೆಯೊಳಗೆ ಇಳಿಯಬಾರದೆಂದು ಪೊಲೀಸರು ಸೂಚನೆ ನೀಡಿದ್ದಾರೆ.

ಮಾದಾಪುರ ಮತ್ತು ಹಟ್ಟಿಹೊಳೆಯ ನೀರು ಒಂದೆಡೆ ಸೇರಿ ಹಾರಂಗಿ ಹಿನ್ನೀರಾಗಿ ಪರಿವರ್ತನೆ ಯಾಗುವ ಗರಗಂದೂರಿನಲ್ಲಿ ನಿರ್ಮಿಸಿರುವ ಸೇತುವೆಯಲ್ಲಿ ಭಾರೀ ಪ್ರಮಾಣದ ಮರಮುಟ್ಟುಗಳು ಶೇಖರಣೆಯಾಗಿದೆ.

ಹಳೆಯ ಸೇತುವೆಯ ತಳಭಾಗದವರೆಗೆ ನೀರಿನ ಹರಿವು ಕಂಡುಬಂದಿದ್ದು, ಕಳೆದ ಸಾಲಿನಲ್ಲಿ ಭೂಕುಸಿತಕ್ಕೆ ಒಳಗಾಗಿ ಧರಾಶಾಹಿ ಯಾಗಿದ್ದ ಮರದ ತುಂಡುಗಳು ಈ ವರ್ಷದ ಮಳೆಗೆ ಹೊಳೆಯಲ್ಲಿ ಹರಿದು ಬರಲಾರಂಭಿಸಿವೆ.

ಹಳೆಯ ಸೇತುವೆಗೆ ಅಡ್ಡಲಾಗಿ ಕಟ್ಟಿರುವ ತಡೆಯಿಂದಾಗಿ ಗರಗಂದೂರಿನಲ್ಲಿ ಭಾರೀ ಪ್ರಮಾಣದ ಮರಗಳು ಶೇಖರಣೆಯಾಗಿವೆ. ಇಂತಹ ಮರಗಳನ್ನು ಸೌದೆಗಾಗಿ ಉಪಯೋಗಿಸಲು ಸ್ಥಳೀಯರು ಹೊಳೆಗೆ ಇಳಿಯುವ ಸಾಧ್ಯತೆ ಇದ್ದು, ಅಪಾಯಗಳು ಸಂಭವಿಸಬಹುದಾದ ಹಿನ್ನೆಲೆ ಯಾರೂ ಸಹ ಹೊಳೆಗೆ ಇಳಿಯದಂತೆ ಪೊಲೀಸರು ಸೂಚನೆ ನೀಡಿದ್ದಾರೆ.

- ವಿಜಯ್