ಮಡಿಕೇರಿ, ಆ. 13: ಈ ಬಾರಿಯ ಅತಿವೃಷ್ಟಿಗೆ ಹಲವೆಡೆ ಪ್ರವಾಹ ಪರಿಸ್ಥಿತಿ ತಲೆದೋರಿದ್ದರೆ, ಇನ್ನು ಕೆಲವೆಡೆ ಭೂಕುಸಿತವುಂಟಾಗಿದೆ. ಮತ್ತೆ ಕೆಲವೆಡೆ ಭೂಮಿ ಬಿರುಕು ಬಿಟ್ಟಿದೆ. ಇತ್ತ ಕಾರುಗುಂದ ಗ್ರಾಮದಲ್ಲಿ ಭೂಮಿ ಬಾಯ್ತೆರೆದಂತೆ ಭಾರೀ ಬಿರುಕು ಕಾಣಿಸಿಕೊಂಡಿದೆ.ಕಾರುಗುಂದ ಗ್ರಾಮದ ನಾಪಂಡ ಕುಟುಂಬಸ್ಥರ ಐನ್ಮನೆ ಬಳಿ ಭೂಮಿ ಬಾಯಿಬಿಟ್ಟಿದೆ. ಪುರಾತನ ಕಾಲದ ಐನ್ಮನೆ ಬಳಿಯಿಂದ ಸುಮಾರು 100 ಮೀಟರ್ವರೆಗೆ ಅರ್ಧ ಅಡಿಗೂ ಹೆಚ್ಚಿಗೆ ಅಗಲದಲ್ಲಿ ಭೂಮಿಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಐನ್ಮನೆಯ ಹಿಂಬದಿಯ ಹೊಸ ಅಡುಗೆ ಕೋಣೆಗಾಗಿ ಬಿರುಕು ಬಿಟ್ಟಿದ್ದು, ಮನೆಗೂ ಹಾನಿಯಾಗಿದೆ. ಸಮತಟ್ಟು ಪ್ರದೇಶದಲ್ಲಿ ಈ ರೀತಿಯ ಬಿರುಕು ಕಾಣಿಸಿಕೊಂಡಿರುವದು ಅಚ್ಚರಿ ಮೂಡಿಸಿದ್ದು, ಭೂವಿಜ್ಞಾನಿಗಳು ಪರಿಶೀಲಿಸಿ ಬಿರುಕಿಗೆ ಕಾರಣ ಕಂಡುಕೊಳ್ಳಬೇಕಿದೆ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.