ವೃತ್ತ ನಿರೀಕ್ಷಕ ದಿವಾಕರ್
ಗೋಣಿಕೊಪ್ಪ ವರದಿ, ಆ. 11: ಹಬ್ಬ, ಹರಿದಿನಗಳಲ್ಲಿ ಸರ್ವ ಧರ್ಮಿಯರು ಒಂದಾಗಿ ಆನ್ಯೋನ್ಯನತೆಯಿಂದ ಪಾಲ್ಗೊಳ್ಳುತ್ತಿರುವದು ಸಾಮರಸ್ಯ ಕಾಪಾಡಲು ಸಾಧ್ಯವಾಗುತ್ತಿದೆ ಎಂದು ವೃತ್ತ ನಿರೀಕ್ಷಕ ದಿವಾಕರ್ ಅಭಿಪ್ರಾಯಪಟ್ಟರು.
ತಾ. 12 ರಂದು ಆಚರಿಸಲ್ಪಡುವ ಬಕ್ರಿದ್ ಪ್ರಯುಕ್ತ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಆಯೋಜಿಸಿದ್ದ ಪೂರ್ವಭಾವಿ ಶಾಂತಿಸಭೆಯಲ್ಲಿ ಅವರು ಮಾತನಾಡಿ, ಗೋಣಿಕೊಪ್ಪ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲೂ ಎಲ್ಲಾ ಧರ್ಮಿಯರು ಒಂದಾಗಿ ಬದುಕು ಸಾಗಿಸುತ್ತಿದ್ದಾರೆ. ಇದರಂತೆ ಹಬ್ಬ ಹರಿದಿನಗಳಲ್ಲೂ ಮುಂದುವರಿಯಬೇಕು. ಸಾಮರಸ್ಯ ಕಾಪಾಡಲು ಎಲ್ಲರ ಸಹಕಾರ ಅಗತ್ಯವಿದೆ. ಸರ್ಕಾರದ ನಿಯಮದಂತೆ ಶಾಂತಿಸಭೆ ನಡೆಸಲಾಗುತ್ತಿದೆ. ಎಲ್ಲರೂ ಒಂದಾಗಿ ಮುಂದುವರಿಯಬೇಕಿದೆ ಎಂದರು.
ಪೊಲೀಸ್ ಉಪ ನಿರೀಕ್ಷಕ ಶ್ರೀಧರ್ ಮಾತನಾಡಿ, ಸಾಮರಸ್ಯ ಭಾವನೆ ಮೂಡಿಸಲು ಎಲ್ಲರೂ ಒಂದಾಗಬೇಕಿದೆ. ಆಚರಣೆಯಂದು ಪಟ್ಟಣದಲ್ಲಿರುವ ಮೂರು ಮಸೀದಿಗಳಲ್ಲಿ ಮೆರವಣಿಗೆ ಇಂತಹವುಗಳು ಇದ್ದರೆ ಮಾಹಿತಿ ನೀಡುವಂತೆ ಮನವಿ ಮಾಡಿಕೊಂಡರು.
ಹನಫಿ ಮಸೀದಿ ಪ್ರತಿನಿಧಿ ಅಬ್ದುಲ್ ಸಮ್ಮದ್ ಮಾತನಾಡಿ, ಸಹೋದರ ಭಾವನೆಯಲ್ಲಿ ನಾವು ಎಲ್ಲರೊಂದಿಗೆ ಬದುಕು ಸಾಗಿಸುತ್ತಿದ್ದೇವೆ. ಹಬ್ಬದ್ಲಲ್ಲೂ ಇದು ಮುಂದುವರಿಯಲಿದೆ ಎಂದರು. ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೆಲ್ವಿ ಹಬ್ಬದ ಶುಭಾಶಯ ಕೋರಿದರು.
ಈ ಸಂದರ್ಭ ಅಪರಾಧ ಉಪನಿರೀಕ್ಷಕ ಆರ್. ಮಂಚಯ್ಯ, ಪ್ರಮುಖರುಗಳಾದ ಜಪ್ಪು ಸುಬ್ಬಯ್ಯ, ಮಲ್ಚೀರ ಗಾಂಧಿ, ಕುಲ್ಲಚಂಡ ಗಣಪತಿ, ಮುಖ್ತಾರ್ ಇತರರು ಇದ್ದರು.