ಶ್ರೀಮಂಗಲ, ಆ. 11: ದಕ್ಷಿಣ ಕೊಡಗಿನ ವ್ಯಾಪ್ತಿಯಲ್ಲಿ ಅತಿಹೆಚ್ಚು ಮಳೆ ಸುರಿಯುವ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕಳೆದ 10 ದಿನದಿಂದ ನಾಪತ್ತೆಯಾಗಿದ್ದ ಸೂರ್ಯ ಭಾನುವಾರ ದರ್ಶನ ಭಾಗ್ಯ ನೀಡಿದ!

ಕಳೆದ 10 ದಿನದಿಂದ ಮಳೆ ಆರ್ಭಟಕ್ಕೆ ಮನೆಯಿಂದ ಹೊರಬರಲು ಆಗದೇ ಬಂಧಿಯಾಗಿದ್ದ ಜನ ಭಾನುವಾರ ಮನೆಯ ಹೊರಕ್ಕೆ ಕಾಲಿಟ್ಟರು.

ಕಳೆದ 10 ದಿನದಿಂದ ದಕ್ಷಿಣ ಕೊಡಗಿನ ಬಿರುನಾಣಿ, ಶ್ರೀಮಂಗಲ, ಹುದಿಕೇರಿ, ಟಿ. ಶೆಟ್ಟಿಗೇರಿ, ಬಿ.ಶೆಟ್ಟಿಗೇರಿ ವ್ಯಾಪ್ತಿಗೆ ಪ್ರತಿದಿನ ಸುರಿಯುತ್ತಿದ್ದ ಧಾರಾಕಾರ ಮಳೆ ಕಳೆದ 24 ಗಂಟೆಗಳಲ್ಲಿ ತಗ್ಗಿದ್ದು, ಈ ವ್ಯಾಪ್ತಿಯ ಜನರಲ್ಲಿ ನಿಟ್ಟುಸಿರು ಬಿಡುವಂತೆ ಮಾಡಿದೆ.

ಕಳೆದ 10 ದಿನಗಳಲ್ಲಿ ಸುರಿದ ಧಾರಾಕಾರ ಮಳೆ ಮತ್ತು ರಭಸದ ಗಾಳಿಗೆ ಕಾಫಿ, ಕರಿಮೆಣಸು, ಅಡಿಕೆ ಮತ್ತು ಭತ್ತದ ಗದ್ದೆಗಳಿಗೆ ಅಪಾರ ಪ್ರಮಾಣದಲ್ಲಿ ನಷ್ಟವಾಗಿರುವದು ಗೋಚರಿಸಿದೆ. ಈ ವ್ಯಾಪ್ತಿಯಲ್ಲಿ ಎಲ್ಲಿ ಕಣ್ಣು ಹಾಯಿಸಿದರೂ, ಭೂಕುಸಿತ, ಮರ ಧರೆಗೆ ಉರುಳಿರುವ ದೃಶ್ಯಗಳೇ ಗೋಚರಿಸುತ್ತದೆ. ಟಿ. ಶೆಟ್ಟಿಗೇರಿಯಿಂದ ಪರಕಟಕೇರಿ ಮಾರ್ಗದಲ್ಲಿ ಸುಮಾರು 40 ರಿಂದ 45 ಜಾಗದಲ್ಲಿ ಭೂಕುಸಿತ, ಬರೆ ಜಾರಿರುವದು ಕಂಡುಬಂದಿದೆ.

ಬಿ.ಎಸ್.ಎನ್.ಎಲ್. ದೂರವಾಣಿಯ ಶ್ರೀಮಂಗಲ, ಬಿರುನಾಣಿ, ಪರಕಟಕೇರಿ ಟವರ್ ಸ್ಥಗಿತವಾಗಿದೆ. ಈ ಸಂಸ್ಥೆ ಸೇವೆಯನ್ನು ಅವಲಂಭಿಸಿರುವ ಗ್ರಾಹಕರು ಸಂಪರ್ಕ ಇಲ್ಲದೆ ಪರಿತಪಿಸುವಂತಾಗಿದೆ.