ಸಿದ್ದಾಪುರ, ಆ. 11: ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದ ಆವರಣವು ಖಾಸಗಿ ವಾಹನ ನಿಲ್ದಾಣವಾಗಿ ಮಾರ್ಪಟ್ಟಿದ್ದು ಆಸ್ಪತ್ರೆಗೆ ಚಿಕಿತ್ಸೆಗೆ ಬರುವ ರೋಗಿಗಳ ವಾಹನ ಆಸ್ಪತ್ರೆಯ ಅವರಣ ಪ್ರವೇಶಿಸಲು ಸಾಧ್ಯವಾಗದೆ ರೋಗಿಗಳು ಪರದಾಡುವಂತಾಗಿದೆ.

ಆರೋಗ್ಯ ಕೇಂದ್ರಕ್ಕೆ ಪ್ರತಿನಿತ್ಯ ಸಿದ್ದಾಪುರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಂದ ನೂರಾರು ಮಂದಿ ಚಿಕಿತ್ಸೆಗಾಗಿ ಆಗಮಿಸುತ್ತಾರೆ. ಖಾಸಗಿ ವಾಹನಗಳು ಹಾಗೂ ಆಟೋಗಳು ಆಸ್ಪತ್ರೆಯ ಆವರಣದಲ್ಲಿ ನಿಲುಗಡೆಯಿಂದ ಆಸ್ಪತ್ರೆಯ ಒಳಗೆ ಹೋಗಲು ಸಾಧ್ಯವಾಗದೆ ರಸ್ತೆಯಲ್ಲಿಯೆ ರೋಗಿಗಳನ್ನು ಬಿಟ್ಟು ತೆರಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಅನಾರೋಗ್ಯ ಪೀಡಿತ ವೃದ್ಧರು, ಹೆಂಗಸರು ಮಕ್ಕಳು ಸೇರಿದಂತೆ ಹಲವು ರೋಗಿಗಳನ್ನು ಕರೆದುಕೊಂಡು ಬಂದ ವಾಹನಗಳು ಆಸ್ಪತ್ರೆಯನ್ನು ಪ್ರವೇಶಿಸಲು ಸಾಧ್ಯವಾಗದೆ ಪ್ರಯಾಸ ಪಡುವಂತಾಗಿದೆ.

ತುರ್ತು ವಾಹನಕ್ಕೂ ಪ್ರಯಾಸ

ಸಿದ್ದಾಪುರದ ಅಂಗಡಿ ಮಾಲೀಕರ ವಾಹನಗಳು, ಬಾಡಿಗೆ ವಾಹನಗಳು, ಸ್ಥಳೀಯ ವಾಹನ ಮಾರಾಟಗಾರರ ವಾಹನಗಳನ್ನು ಬೆಳಗ್ಗೆಯೇ ತಂದು ಆಸ್ಪತ್ರೆಯ ಅವರಣದಲ್ಲಿ ನಿಲ್ಲಿಸಿ ಅವರುಗಳು ತಮ್ಮ ಕೆಲಸಕ್ಕೆ ತೆರಳಿದರೆ ಮತ್ತೆ ಅ ವಾಹನಗಳನ್ನು ಅಲ್ಲಿಂದ ತೆಗೆಯುವದು ಅವರುಗಳ ಕೆಲಸ ಮುಗಿದ ನಂತರ ಅಥವಾ ರಾತ್ರಿ ಕಾರುಗಳು ಜೀಪುಗಳು ಸೇರಿದಂತೆ ಇತರ ವಾಹನಗಳನ್ನು ಇಲ್ಲಿ ನಿಲ್ಲಿಸಿ ತೆರಳುವದರಿಂದ ಆಸ್ಪತ್ರೆಗೆ ಆಗಮಿಸುವ ರೋಗಿಗಳ ವಾಹನ ನಿಲ್ಲಿಸಲು ಜಾಗವಿಲ್ಲದಂತಾಗಿದೆ. ಆವರಣ ಪೂರ್ತಿ ಖಾಸಗಿ ವ್ಯಕ್ತಿಗಳ ವಾಹನಗಳು, ಟ್ಯಾಕ್ಸಿ ಚಾಲಕರ ವಾಹನಗಳ ನಿಲ್ದಾಣವಾಗಿದೆ. ಕೆಲವು ವಾಹನ ವ್ಯಾಪಾರಸ್ಥರು ಆಸ್ಪತ್ರೆಯ ಅವರಣದಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಿ ಅವರಣದಲ್ಲಿಯೇ ತಮ್ಮಗಳ ವ್ಯವಹಾರ ಕುದುರಿಸುತ್ತಿರುವದು ಸಾಮಾನ್ಯವಾಗಿದೆ.

ಕಾಣದಂತಿರುವ ಪೋಲಿಸ್ ಇಲಾಖೆ

ಈ ಬಗ್ಗೆ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳು ಪೊಲೀಸ್ ಇಲಾಖೆಗೆ ದೂರು ನೀಡಿದರೂ ಅವರು ಯಾವದೇ ಕ್ರಮಕ್ಕೆ ಮುಂದಾಗುತಿಲ್ಲ ಎಂದು ಆಸ್ಪತ್ರೆಯ ಸಿಬ್ಬಂದಿಗಳು ಆರೋಪಿಸುತ್ತಾರೆ. ವಾಹನಗಳನ್ನು ನಿಲ್ಲಿಸುವವರ ಬಳಿ ಹೇಳಿದರೆ ಅವರು ನಮ್ಮ ಮೇಲೆಯೇ ಜಗಳವಾಡಲು ಬರುತ್ತಾರೆ ಎಂದು ಆಸ್ಪತ್ರೆಯ ಸಿಬ್ಬಂದಿಗಳು ಅಸಹಾಯಕತೆ ವ್ಯಕ್ತ ಪಡಿಸುತಿದ್ದಾರೆ.

ಕಾಳಜಿ ಇಲ್ಲದ ಪ್ರತಿನಿಧಿಗಳು

ಆಸ್ಪತ್ರೆಯಲ್ಲಿ ಒಬ್ಬರೆ ವೈದ್ಯರಿದ್ದಾರೆ ಗ್ರಾ.ಪಂ. ವ್ಯಾಪ್ತಿಯಲ್ಲಿ ವ್ಯಾಪಕವಾಗಿ ಜ್ವರ ಸೇರಿದಂತೆ ಇತರ ಸಾಂಕ್ರಾಮಿಕ ರೋಗ ಹರಡುವ ಭೀತಿ ನಿರ್ಮಾಣ ವಾಗಿದೆ, ಪ್ರತಿದಿನ ನೂರಾರು ಸಾರ್ವಜನಿಕರು ಆನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಆಗಮಿಸಿ ಆಸ್ಪತ್ರೆಯ ಒಳಗೆ ವಾಹನ ನಿಲ್ಲಿಸಲು ಸಾಧ್ಯವಾಗದೆ ಪರದಾಡುತಿರುವ ಎಲ್ಲಾ ಸಮಸ್ಯೆಗಳು ಈ ಭಾಗದ ಜನ ಪ್ರತಿನಿಧಿಗಳ ಗಮನಕ್ಕೆ ಬಂದರೂ ಅವರುಗಳು ಮಾತ್ರ ತಮಗೆ ಏನೂ ತಿಳಿದಿಲ್ಲ, ಸಮಸ್ಯೆಗಳಿಗೆ ಸಂಬಂಧವು ಇಲ್ಲ ಎಂಬಂತೆ ವರ್ತಿಸುತಿರುವದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಬೇಡದ ವಿಷಯಗಳ ಬಗ್ಗೆ ಗಂಟೆಗಟ್ಟಲೆ ಚರ್ಚೆ ಮಾಡುವ ಇವರುಗಳು ಆಸ್ಪತ್ರೆಯ ಮೂಲಭೂತ ವೈದ್ಯರ ಕೊರತೆ ಮುಂತಾದ ಗಂಭೀರ ವಿಷಯಗಳಲ್ಲಿ ಮೌನ ವಹಿಸಿರುವದೇಕೆ ಎಂದು ಪ್ರಶ್ನಿಸುತಿದ್ದಾರೆ.

ಇಲ್ಲಿ ಯಾವಾಗಲೂ ಬೇರೆಯವರ ಗಾಡಿಗಳು ನಿಂತಿರುತ್ತದೆ, ನಾವು ರೋಗಿಗಳನ್ನು ಕರೆದುಕೊಂಡು ಬಂದು ವಾಹನ ನಿಲ್ಲಿಸಲು ಕಷ್ಟ ಪಡುತ್ತೇವೆ. ರೋಗಿಯನ್ನು ಆಸ್ಪತ್ರೆಯ ಬಾಗಿಲ ಮುಂದೆ ಇಳಿಸಿ ನಮ್ಮ ಗಾಡಿಯನ್ನು ಟೌನಿನಲ್ಲಿ ಅಥವಾ ಬೇರೆ ಕಡೆ ನಿಲ್ಲಿಸಬೇಕು. ಚಿಕಿತ್ಸೆ ಆದ ಮೇಲೆ ಮತ್ತೆ ಗಾಡಿ ಅಲ್ಲಿಂದ ತಂದು ರೋಗಿಯನ್ನು ಕರೆದುಕೊಂಡು ಹೋಗಬೇಕು. ಇದರಿಂದ ನಮಗೆ ಭಾರೀ ತೊಂದರೆಯಾಗುತ್ತಿದೆ ಎಂದು ಸ್ಥಳೀಯ ನಿವಾಸಿ ಮೋಹನ್ ತಮ್ಮ ಕಷ್ಟವನ್ನು ಹಂಚಿಕೊಂಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿದ್ದಾಪುರ ಠಾಣಾಧಿಕಾರಿ ದಯಾನಂದ್ ತಮಗೆ ಯಾವದೇ ದೂರುಗಳು ಬಂದಿಲ್ಲ. ಅಲ್ಲಿ ನಿಲ್ಲಿಸಿರುವ ಎಲ್ಲ ವಾಹನಗಳು ಚಿಕಿತ್ಸೆ ಪಡೆಯಲು ಬಂದ ರೋಗಿಗಳದಾಗಿರ ಬಹುದೆಂದು ತಿಳಿದು ಯಾವ ಕ್ರಮ ಕೈಗೊಂಡಿಲ್ಲ. ಇನ್ನೂ ಮುಂದೆ ರೋಗಿಗಳಲ್ಲದ ವಾಹನಗಳನ್ನು ಆಸ್ಪತ್ರೆ ಅವರಣದಲ್ಲಿ ನಿಲ್ಲಿಸಿದಲ್ಲಿ ಅಂತಹ ವಾಹನಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವದು ಎಂದಿದ್ದಾರೆ. ಸಿದ್ದಾಪುರ ಗ್ರಾ.ಪಂ. ಪಿಡಿಒ ವಿಶ್ವನಾಥ್ ಆಸ್ಪತ್ರೆಯು ಸಂಪೂರ್ಣ ಅಲ್ಲಿನ ಅಡಳಿತಾಧಿಕಾರಿಗಳ ಅಧೀನ ದಲ್ಲಿದ್ದು, ಅವರುಗಳು ವಾಹನಗಳ ಪಾರ್ಕಿಂಗ್ ಬಗ್ಗೆ ಗ್ರಾ.ಪಂ.ಗೆ ದೂರು ನೀಡಿದರೆ ಅಗತ್ಯ ಕ್ರಮ ಕೈಗೊಳ್ಳಲಾಗುವದು ಎಂದಿದ್ದಾರೆ.

ಒಟ್ಟಿನಲ್ಲಿ ಸಾಮಾಜಿಕ ಕಳಕಳಿಯಿಲ್ಲದ ಕೆಲವು ವ್ಯಕ್ತಿಗಳಿಂದ, ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಆಸ್ಪತ್ರೆಗೆ ಚಿಕಿತ್ಸೆಗಾಗಿ ಆಗಮಿಸುತಿರುವ ಅದೆಷ್ಟೋ ರೋಗಿಗಳ ವಾಹನ ನಿಲುಗಡೆಗೆ ಸ್ಥಳವಿಲ್ಲದೆ ತೊಂದರೆ ಅನುಭವಿಸುವಂತಾಗಿದೆ.

- ಸುಬ್ರಮಣಿ, ಸಿದ್ದಾಪುರ