ಮಡಿಕೇರಿ, ಆ. 11: ಕೊಡಗಿನಲ್ಲಿ ಮಳೆಯ ಆರ್ಭಟಕ್ಕೆ ತತ್ತರಿಸಿ ಹೋಗಿರುವ ಕುಟುಂಬಗಳನ್ನು ಜಿಲ್ಲಾಡಳಿತದಿಂದ ಗುರುತಿಸಿ; ಇದುವರೆಗೆ ಒಟ್ಟು 1970 ಕುಟುಂಬಗಳ 6603 ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿ; ಪರಿಹಾರ ಕೇಂದ್ರಗಳಲ್ಲಿ ಆಸರೆ ಕಲ್ಪಿಸಲಾಗಿದೆ. ಈ ಸಂಬಂಧ ಪ್ರಸಕ್ತ 48 ಪರಿಹಾರ ಕೇಂದ್ರಗಳನ್ನು ಅಲ್ಲಲ್ಲಿ ಪ್ರಾರಂಭಿಸಲಾಗಿದೆ. ಈ ಕೇಂದ್ರಗಳಲ್ಲಿ ಬಾಣಂತಿಯರು, ಗರ್ಭಿಣಿಯರು, ಶಿಶುಗಳು, ಮಕ್ಕಳು, ವೃದ್ಧರು ಸೇರಿದಂತೆ ಪ್ರತಿಯೊಬ್ಬರ ಬಗ್ಗೆ ವಿಶೇಷ ಕಾಳಜಿ ವಹಿಸುವ ಮೂಲಕ; ಆಹಾರ, ಬೆಚ್ಚನೆಯ ಉಡುಪು, ಔಷಧೋಪಚಾರ ನೀಡುವದ ರೊಂದಿಗೆ ತುರ್ತು ಸೇವೆ ಒದಗಿಸಲಾಗಿದೆ.

ಈಗಾಗಲೇ ಸಂತ್ರಸ್ತರಿಗೆ ಅಗತ್ಯ ನೆರವು ಒದಗಿಸುವಲ್ಲಿ ಕೊಡಗು ಜಿಲ್ಲಾಡಳಿತಕ್ಕೆ ಮೈಸೂರು ಹಾಗೂ ಉಡುಪಿ ಜಿಲ್ಲಾಧಿಕಾರಿಗಳು ಕೂಡ ನೆರವು ಕಲ್ಪಿಸಿದ್ದಾರೆ. ವಿವಿಧ ಸಂಘ ಸಂಸ್ಥೆಗಳು, ಸ್ಥಳೀಯವಾಗಿ ಆಯ ಗ್ರಾ.ಪಂ. ವ್ಯಾಪ್ತಿಯ ದಾನಿಗಳು ಕೈಜೋಡಿಸಿದ್ದಾರೆ. ಕೊಡಗಿನ ಪರಿಸ್ಥಿತಿ ಎದುರಿಸಲು ಯಾವದೇ ಕೊರತೆ ಉಂಟಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ‘ಶಕ್ತಿ’ಯೊಂದಿಗೆ ವಿವರ ನೀಡಿದ್ದಾರೆ.

ಕಾಲಾವಕಾಶ ಬೇಕಿದೆ : ಈಗಿನ ಪರಿಸ್ಥಿತಿಯಲ್ಲಿ ಜನತೆ ಮತ್ತು ಜಾನುವಾರುಗಳ ಪ್ರಾಣರಕ್ಷಣೆ ಯೊಂದಿಗೆ; ಅಪಾಯದಲ್ಲಿ ಸಿಲುಕಿರುವ ಮಂದಿಯ ಆಸರೆಗೆ ಕಾಳಜಿ ವಹಿಸಿದ್ದು; ಹಾನಿಗೊಂಡಿರುವ ಮನೆಗಳು ಮತ್ತು ಆಸ್ತಿ - ಪಾಸ್ತಿ ನಷ್ಟದ ಸಮೀಕ್ಷೆ ನಡೆಸಿ ಮಾಹಿತಿ ಕಲೆ ಹಾಕಲು ಕಾಲಾವಕಾಶ ಬೇಕಿದೆ ಎಂದು ಜಿಲ್ಲಾಧಿಕಾರಿ ನುಡಿದರು.ಜಿಲ್ಲೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಮಳೆ ಅಬ್ಬರ ತಗ್ಗಿದೆ. ಇದರಿಂದಾಗಿ ಪ್ರವಾಹ ಪರಿಸ್ಥಿತಿ ಕಡಿಮೆಯಾಗುತ್ತ ಬರುತ್ತಿದೆ. ಭಾನುವಾರ ಬೆಳಗಿನಿಂದ ಕೊಂಚ ಪ್ರಮಾಣದಲ್ಲಿ ಮಳೆಯ ಅಬ್ಬರ ಕಡಿಮೆಯಾಗುತ್ತ ಬರುತ್ತಿದ್ದು, ಚಳಿ ಮತ್ತು ಬಿರುಗಾಳಿ ಇದೆ.

ಸದ್ಯ ಲಭ್ಯವಿರುವ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ 79 ಪ್ರವಾಹ ಪೀಡಿತ ಪ್ರದೇಶಗಳೆಂದು ಗುರುತಿಸಲಾಗಿದೆ. ಮಡಿಕೇರಿ ತಾಲೂಕಿನ 30, ವೀರಾಜಪೇಟೆ ತಾಲೂಕಿನಲ್ಲಿ 32, ಸೋಮವಾರಪೇಟೆ ತಾಲೂಕಿನಲ್ಲಿ 4, ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 5, ವಿರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 8 ಸೇರಿದಂತೆ ಒಟ್ಟು 79 ಪ್ರವಾಹ ಪೀಡಿತ ಪ್ರದೇಶಗಳೆಂದು ಗುರುತಿಸಲಾಗಿದೆ.

ಈವರೆಗೆ ಜಿಲ್ಲೆಯಲ್ಲಿ ಸುಮಾರು 741 ಕ್ಕೂ ಹೆಚ್ಚು ಜನರು ಹಾಗೂ 23 ಕ್ಕೂ ಹೆಚ್ಚು ಜಾನುವಾರುಗಳನ್ನು ರಕ್ಷಿಸಲಾಗಿದೆ. ಜಾನುವಾರುಗಳನ್ನು ಗೋ ಶಾಲೆಗೆ ಸ್ಥಳಾಂತರಿಸಲಾಗಿದೆ. ರಕ್ಷಣೆ ಕಾರ್ಯದಲ್ಲಿ ಎನ್‍ಡಿಆರ್‍ಎಫ್, ಭಾರತೀಯ ಸೇನೆ, ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿ, ಪೊಲೀಸ್ ಇಲಾಖೆ, ಕಂದಾಯ ಹಾಗೂ ರಿವರ್ ರ್ಯಾಪ್ಟಿಂಗ್ ಅಸೋಸಿಯೇಷನ್, ಗ್ರಾಮ ಪಂಚಾಯಿತಿ ಹಾಗೂ ಪಶುಪಾಲನಾ ಇಲಾಖೆ ಸಹಕಾರದಲ್ಲಿ ರಕ್ಷಣೆ ಮಾಡಲಾಗಿದೆ. ‘ಜಿಲ್ಲೆಯ ವಿವಿಧ ಭಾಗಗಳಲ್ಲಿ ಬರೆ ಹಾಗೂ ಮರ ಬಿದ್ದು, ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು,

ತೋರದಲ್ಲಿ ಭೂಕುಸಿತ ಉಂಟಾದ ಸಂದÀರ್ಭ ಪರಮೇಶ್ ಅವರ ಪತ್ನಿ ವಿ.ಪಿ ಮಮತಾ, ಮಗಳು ವಿ.ಪಿ ಲಿಖಿತ ಮೃತಪಟ್ಟ ದುರ್ಘಟನೆ ಬಳಿಕ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಪರಮೇಶ್ ಅವರಿಗೆ ಕೇಂದ್ರದ ಎನ್‍ಡಿಆರ್‍ಎಫ್ ನೆರವಿನ ರೂ. 10 ಲಕ್ಷ ಚೆಕ್ ಹಾಗೂ ಶವಸಂಸ್ಕಾರ ಕಾರ್ಯಕ್ಕೆ ಜಿಲ್ಲಾಡಳಿತದಿಂದ ರೂ. 5 ಸಾವಿರ ಹಣವನ್ನು ವೀರಾಜಪೇಟೆ ತಾಲೂಕು ತಹಶೀಲ್ದಾರ್ ಪುರಂದರ ಅವರು ಇಂದು ಹಸ್ತಾಂತರಿಸಿದರು.