ಭಾಗಮಂಡಲ, ಆ. 11: ಭಾಗಮಂಡಲ ವ್ಯಾಪ್ತಿಯಲ್ಲಿ ಭಾರೀ ಮಳೆಯಿಂದಾಗಿ ರಸ್ತೆಗಳೆಲ್ಲ ಹಾನಿಗೊಳಗಾಗಿರುವ ಕಾರಣ ಶವ ಸಾಗಾಟಕ್ಕೂ ಸಂಕಷ್ಟ ಎದುರಾದ ಘಟನೆ ನಡೆಯಿತು.

ತಣ್ಣಿಮಾನಿಯ ಕುದುಪಜೆ ಕಾವೇರಮ್ಮ (67) ಅವರು ಅಯ್ಯಂಗೇರಿಯ ತಮ್ಮ ಅಳಿಯನ ಮನೆಯಲ್ಲಿ ಅನಾರೋಗ್ಯದಿಂದ ನಿಧನರಾದರು. ಆದರೆ ಅವರ ಮೃತದೇಹವನ್ನು ತಣ್ಣಿಮಾನಿಗೆ ಕೊಂಡೊಯ್ಯಲು ಸೂಕ್ತ ರಸ್ತೆಯ ವ್ಯವಸ್ಥೆಯಿಲ್ಲದೆ ಭಾಗಮಂಡಲಕ್ಕೆ ಜೀಪ್‍ನಲ್ಲಿ ತರಲಾಯಿತು. ಆದರೆ ಅಲ್ಲಿ ರ್ಯಾಫ್ಟಿಂಗ್ ವ್ಯವಸ್ಥೆ ಇರಲಿಲ್ಲ. ನಂತರ ಅನತಿ ದೂರದಲ್ಲಿದ್ದ ರ್ಯಾಫ್ಟ್ ಅನ್ನು ಸ್ಥಳೀಯರೇ ಎಳೆದು ತೊಟ್ಟಿ ಜೀಪ್‍ನಲ್ಲಿ ಹೊತ್ತು ತಂದ ಬಳಿಕ ಶವವನ್ನು ರ್ಯಾಫ್ಟ್‍ನಲ್ಲಿಟ್ಟು ಸ್ಥಳೀಯರೇ ರ್ಯಾಫ್ಟಿಂಗ್ ಮೂಲಕ ತಣ್ಣಿಮಾನಿಗೆ ಸಾಗಿಸಿದರು.

ಪ್ರತಿಭಟನೆ

ಈ ನಡುವೆ ಕೋರಂಗಾಲದಲ್ಲಿ ಎರಡು ದಿನದ ಹಿಂದೆ ಸಾವನ್ನಪ್ಪಿದವರ ಅಂತಿಮ ದರ್ಶನಕ್ಕಾಗಿ ಆಗಮಿಸಿದ್ದ ಮೃತರ ಸಂಬಂಧಿಕರು ಪ್ರವಾಹ ದಾಟಲು ರ್ಯಾಫ್ಟಿಂಗ್ ವ್ಯವಸ್ಥೆ ಇಲ್ಲದ್ದರಿಂದ ಜಿಲ್ಲಾಡಳಿತದ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದ ಘಟನೆ ನಡೆಯಿತು. ಬಳಿಕ ತಹಶೀಲ್ದಾರ್ ರ್ಯಾಫ್ಟ್ ವ್ಯವಸ್ಥೆ ಒದಗಿಸಿದರು. ಸಂಬಂಧಿಕರು ಕೋರಂಗಾಲಕ್ಕೆ ತಲಪುವ ವೇಳೆಗೆ ಮೃತದೇಹವನ್ನು ಸ್ಮಶಾನಕ್ಕೆ ಸಾಗಿಸಲಾಗಿತ್ತು.

ಬರೆ ಕುಸಿತ

ಸಣ್ಣಪುಲಿಕೋಟು ಗ್ರಾಮದ ಉದಿಯನ ಲವ ಎಂಬವರ ಮನೆಯಲ್ಲಿ ಬರೆ ಕುಸಿತಗೊಂಡು ಮನೆಯೊಳಗೆ ನೀರು ನುಗ್ಗಿದ್ದು, ಅದೃಷ್ಟವಶಾತ್ ಮನೆಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಭಾಗಮಂಡಲ ವ್ಯಾಪ್ತಿಯಲ್ಲಿ ಪ್ರವಾಹದಿಂದ ಹಾನಿಗೊಳಗಾಗಿದ್ದ 25ಕ್ಕೂ ಅಧಿಕ ಅಂಗಡಿ ಮಳಿಗೆಗಳಿಗೆ ಇಂದು ಕಂದಾಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ನಷ್ಟದ ಮಾಹಿತಿ ಪಡೆದುಕೊಂಡರು.

ಎಂ.ಎಲ್.ಸಿ. ಭೇಟಿ

ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿಯವರು ಭಾಗಮಂಡಲದ ಅಂಗಡಿಗಳಿಗೆ, ಮನೆಗಳಿಗೆ ಹಾಗೂ ಕೋರಂಗಾಲಕ್ಕೆ ಭೇಟಿ ನೀಡಿದ್ದರು. ಪ್ರಮುಖರಾದ ಕುದುಕುಳಿ ಭರತ್, ರಾಜು ರೈ, ಪಿ.ಡಿ.ಪೊನ್ನಪ್ಪ, ಕಾಳನ ರವಿ ಇದ್ದರು.

-ಕುಯ್ಯಮುಡಿ ಸುನಿಲ್