ಮಡಿಕೇರಿ, ಆ. 11: ಕೊಡಗು ಜಿಲ್ಲೆ ಸತತ ಎರಡನೇ ವರ್ಷ ಪ್ರಾಕೃತಿಕ ವಿಕೋಪಕ್ಕೆ ನಲುಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಆಗಸ್ಟ್ ಆರಂಭದ ತನಕವೂ ಕ್ಷೀಣಗೊಂಡಂತ್ತಿದ್ದ ಮುಂಗಾರು ಮಳೆ ಬಳಿಕ ತನ್ನ ಪ್ರತಾಪ ತೋರಿದ್ದು; ಇಡೀ ಜಿಲ್ಲೆ ನರಕ ಸದೃಶವಾಗಿ ಪರಿಣಮಿಸಿದೆ. ಎಲ್ಲೆಲ್ಲೂ ಜಲಾವೃತಗೊಳ್ಳುವದ ರೊಂದಿಗೆ ಹಲವಾರು ವರ್ಷಗಳ ಇತಿಹಾಸದ ಬಳಿಕ ಇಂತರ ಸನ್ನಿವೇಶ ಕೊಡಗಿನಲ್ಲಿ ನಿರ್ಮಾಣವಾಗಿದೆ. ಕಳೆದ ಬಾರಿ ಉತ್ತರ ಕೊಡಗಿನ ಭಾಗದಲ್ಲಿ ಉಂಟಾಗಿದ್ದ ಭೂಕುಸಿತ, ಬರೆಜಾರುವಿಕೆ, ರಸ್ತೆ ಸಂಪರ್ಕ ಕಡಿತದಂತಹ ಘಟನೆಗಳು ಈ ಬಾರಿ ಹೆಚ್ಚಾಗಿ ದಕ್ಷಿಣ ಕೊಡಗಿನಲ್ಲಿ ಸಂಭವಿಸಿದೆ. ಸಾಧಾರಣವಾಗಿ ಮಳೆ ಕಡಿಮೆಯಾಗುವ ಕುಶಾಲನಗರ ವಿಭಾಗವೂ ಕಾವೇರಿ ಪ್ರಹಾಹದಿಂದಾಗಿ ನಲುಗಿ ಹೋಗಿದೆ. ಇದೀಗ ಮಳೆ ಒಂದಷ್ಟು ಕ್ಷೀಣಗೊಂಡಿದ್ದು, ಪ್ರವಾಹ ಪರಿಸ್ಥಿತಿ ತುಸು ಇಳಿಮುಖವಾಗುತ್ತಿ ದ್ದರೂ ಹವಾಮಾನ ಇಲಾಖೆಯಿಂದ ಇನ್ನೂ ಕೆಲದಿನ ಮಳೆ ಅಧಿಕವಾಗುವ ಮುನ್ನೆಚ್ಚರಿಕೆಯ ಕಾರಣದಿಂದ ಜಿಲ್ಲಾದ್ಯಂತ ಮತ್ತೆ ರೆಟ್ ಅಲರ್ಟ್ ಘೋಷಿಸಲ್ಪಟ್ಟಿರುವದರಿಂದ ಜನತೆಯ ಆತಂಕ ದೂರವಾಗಿಲ್ಲ.ವಾರದ ಅವಧಿಯಲ್ಲಿ ಸರಾಸರಿ 37.45 ಇಂಚು!

ಜಿಲ್ಲೆಯಲ್ಲಿ ಆಗಸ್ಟ್ 3ರ ಬಳಿಕ ತಾ. 11ರವರೆಗಿನ ಅವಧಿಯಲ್ಲಿ ಕೇವಲ ಎಂಟು ದಿನಗಳಲ್ಲಿ ಸರಾಸರಿ 37.45 ಇಂಚಿನಷ್ಟು ಭಾರೀ ಮಳೆ (1915.68 ಮಿ.ಮೀ.)ಯಾಗಿದೆ. ಇದು ಜಿಲ್ಲಾ ಸರಾಸರಿಯಾದರೆ ಗ್ರಾಮೀಣ ಪ್ರದೇಶಗಳು ಸೇರಿದಂತೆ ಇತರ ಕೆಲವು ಪಟ್ಟಣಗಳಲ್ಲಿ ಈ ಪ್ರಮಾಣ ಸುಮಾರು 50 ರಿಂದ 60 ಇಂಚಿನವರೆಗೂ ಕಂಡು ಬಂದಿರುವದು ಪ್ರಸ್ತುತ ಉಂಟಾದ ವಿಕೋಪಕ್ಕೆ ಕಾರಣವಾಗಿದೆ.

ಆ. 3ರ ತನಕ ಜಿಲ್ಲೆಗೆ ಜನವರಿ ಯಿಂದ 39.15 ಇಂಚಿನಷ್ಟು ಸರಾಸರಿ ಮಳೆಯಾಗಿದ್ದರೆ ಈ ಪ್ರಮಾಣ ತಾ.11ರ ವೇಳೆಗೆ 76.62 ಇಂಚಿಗೆ ಏರಿಕೆಯಾಗಿದ್ದು, ಈ ಅಲ್ಪಾವಧಿಯಲ್ಲಿ 37.45 ಇಂಚು ಸುರಿದಿದೆ. ಕಳೆದ ಸಾಲಿನಲ್ಲಿ ಬೇಸಿಗೆ ಅವಧಿಯಿಂದಲೇ ಮಳೆ ಆಗಾಗ್ಗೆ ಸುರಿದಿದ್ದರಿಂದ ಈ ಅವಧಿವರೆಗೆ 113.57 ಇಂಚು ಮಳೆಯಾಗಿತ್ತು.

(ಮೊದಲ ಪುಟದಿಂದ) ಆದರೆ ಪ್ರಸಕ್ತ ವರ್ಷ ಕೆಲವೇ ದಿನಗಳಲ್ಲಿ ಭಾರೀ ಮಳೆಯಾಗಿದೆ.

ಮಡಿಕೇರಿ 46.31 ಇಂಚು

ಮಡಿಕೇರಿ ತಾಲೂಕಿನಲ್ಲಿ ತಾ. 3 ರಿಂದ ತಾ.11ರ ಅವಧಿಯಲ್ಲಿ 46.31 ಇಂಚು ಸರಾಸರಿ ಮಳೆಯಾಗಿದೆ. ಆ. 3ರ ತನಕ 52.83 ಇಂಚು ಮಳೆಯಾಗಿದ್ದರೆ ಇದೀಗ ಈ ಪ್ರಮಾಣ 99.14 ಇಂಚಿಗೆ ಏರಿದ್ದು, ಈ ಅವಧಿಯಲ್ಲಿ 46.31 ಇಂಚು ಸುರಿದಿದೆ.

ವೀರಾಜಪೇಟೆಗೂ 40 ಇಂಚು

ವೀರಾಜಪೇಟೆ ತಾಲೂಕಿಗೂ ಕೇವಲ ಎಂಟು ದಿನಗಳ ಅವಧಿಯಲ್ಲಿ ಸರಾಸರಿ 40 ಇಂಚು ಮಳೆಯಾಗಿದೆ. ತಾ.3ರವರೆಗೆ 41.07 ಇಂಚಿನಷ್ಟಾಗಿದ್ದ ಮಳೆ ತಾ.11ರ ವೇಳೆಗೆ 81.13 ಇಂಚಿಗೆ ಏರಿಕೆಯಾಗಿದ್ದು, ದ್ವಿಗುಣವಾಗಿದೆ.

ಸೋಮವಾರಪೇಟೆಗೆ 25.54 ಇಂಚು

ಸೋಮವಾರಪೇಟೆ ತಾಲೂಕಿನಲ್ಲಿ ಎಂಟು ದಿನಗಳ ಅವಧಿಯಲ್ಲಿ 25.54 ಇಂಚು ಸರಾಸರಿ ಮಳೆಯಾಗಿದೆ. ತಾ.3ರ ತನಕ 23.62 ಇಂಚಿನಷ್ಟಾಗಿದ್ದ ಮಳೆ ಇದೀಗ 49.16 ಇಂಚಿಗೆ ಏರಿದ್ದು, ಈ ತಾಲೂಕಿನಲ್ಲಿ ಅಧಿಕ ಮಳೆ ಕಂಡು ಬಂದಿದೆ.

ಹೋಬಳಿವಾರು ವಿವರ

ತಾ.11ರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಜಿಲ್ಲೆಯ ವಿವಿಧ ಹೋಬಳಿಗಳಲ್ಲಿ ಸುರಿದಿರುವ ಮಳೆಯ ಪ್ರಮಾಣ ಇಂತಿದೆ.

ಮಡಿಕೇರಿ 4.10 ಇಂಚು, ನಾಪೋಕ್ಲು 2.88 ಇಂಚು, ಸಂಪಾಜೆ 4 ಇಂಚು, ಭಾಗಮಂಡಲ 4.4 ಇಂಚು, ವೀರಾಜಪೇಟೆ 2.65 ಇಂಚು, ಹುದಿಕೇರಿ 2.91 ಇಂಚು, ಶ್ರೀಮಂಗಲ 1.16 ಇಂಚು, ಪೊನ್ನಂಪೇಟೆ 1.38 ಇಂಚು, ಅಮ್ಮತ್ತಿ 1.16 ಇಂಚು, ಬಾಳೆಲೆ 2.44 ಇಂಚು, ಸೋಮವಾರಪೇಟೆ 1.39, ಶನಿವಾರ ಸಂತೆ 0.92 ಇಂಚು, ಶಾಂತಳ್ಳಿ 3.57 ಇಂಚು, ಕೊಡ್ಲಿಪೇಟೆ 1.24 ಇಂಚು, ಕುಶಾಲನಗರ 0.84 ಇಂಚು, ಸುಂಟಿಕೊಪ್ಪ 1.48 ಇಂಚು ಮಳೆಯಾಗಿದೆ.

ಹಾರಂಗಿ ಜಲಾಶಯದ ನೀರಿನ ಮಟ್ಟ

ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2853.28 ಅಡಿಗಳು, ಕಳೆದ ವರ್ಷ ಇದೇ ದಿನ 2856.88 ಅಡಿ. ಹಾರಂಗಿಯಲ್ಲಿ ಬಿದ್ದ ಮಳೆ 39.80 ಮಿ.ಮೀ, ಕಳೆದ ವರ್ಷ ಇದೇ ದಿನ 10.20 ಮಿ.ಮೀ. ಇಂದಿನ ನೀರಿನ ಒಳಹರಿವು 14606 ಕ್ಯುಸೆಕ್, ಕಳೆದ ವರ್ಷ ಇದೇ ದಿನ ನೀರಿನ ಒಳಹರಿವು 13815 ಕ್ಯುಸೆಕ್. ಇಂದಿನ ನೀರಿನ ಹೊರ ಹರಿವು ನದಿಗೆ 16875 ಕ್ಯುಸೆಕ್. ನಾಲೆಗೆ 750 ಕ್ಯುಸೆಕ್. ಕಳೆದ ವರ್ಷ ಇದೇ ಅವಧಿಯಲ್ಲಿ ನದಿಗೆ 8075, ನಾಲೆಗೆ 1000 ಕ್ಯುಸೆಕ್.