ಶ್ರೀಮಂಗಲ, ಆ. 11: ಕಳೆದ 10 ದಿನಗಳಿಂದ ಧಾರಾಕಾರ ಮಳೆ ಹಿನ್ನಲೆ, ಪ್ರವಾಹ ಮತ್ತು ಭೂಕುಸಿತದಿಂದ ದಕ್ಷಿಣ ಕೊಡಗಿನ ವ್ಯಾಪ್ತಿಯಲ್ಲಿ ಸಂಚಾರ ಸ್ಥಗಿತಗೊಂಡಿದ್ದ ಖಾಸಗಿ ಮತ್ತು ಸರ್ಕಾರಿ ಬಸ್ ಸೇವೆ ಭಾನುವಾರದಿಂದ ಪುನರಾರಂಭವಾಗಿದೆ.

ಮಳೆ ಕಡಿಮೆಯಾದ ಹಿನ್ನಲೆ, ಲಕ್ಷ್ಮಣತೀರ್ಥ ನದಿ ಪ್ರವಾಹ ತಗ್ಗಿದೆ. ಇದರಿಂದ ಶ್ರೀಮಂಗಲ ಪರಿಹಾರ ಕೇಂದ್ರದಲ್ಲಿದ್ದ ಎಲ್ಲಾ 45 ಕುಟುಂಬದ 116 ಜನರು ಸ್ವ ಇಚ್ಛೆಯಿಂದ ತಮ್ಮ ಮನೆಗೆ ಭಾನುವಾರ ಬೆಳ್ಳಿಗ್ಗೆ ತೆರಳಿದರು.

ಇದಲ್ಲದೇ, ಕುಟ್ಟ ಸಮೀಪ ಕೆ. ಬಾಡಗ ಗ್ರಾಮದ ಚೂರಿಕಾಡು ಶಾಲೆಯಲ್ಲಿ ಸ್ಥಾಪಿಸಿರುವ ಪರಿಹಾರ ಕೇಂದ್ರದಲ್ಲಿ 9 ಕುಟುಂಬದ 32 ಜನರು ಕೇಂದ್ರದಲ್ಲಿ ತಂಗಿದ್ದಾರೆ.

ದಕ್ಷಿಣ ಕೊಡಗಿನ ಪೊನ್ನಂಪೇಟೆ ಪಟ್ಟಣಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಶ್ರೀಮಂಗಲ, ಟಿ. ಶೆಟ್ಟಿಗೇರಿ, ಹುದಿಕೇರಿ, ಕುಟ್ಟ ಕ್ಕೆ ವಿದ್ಯುತ್ ಸಂಪರ್ಕ ನೀಡಲು ಸೆಸ್ಕ್ ಸಿಬ್ಬಂದಿಗಳು ಪ್ರಯತ್ನಿಸುತ್ತಿದ್ದಾರೆ. ಆದರೆ ಬಾಳೆಲೆ, ಕಾನೂರು ವ್ಯಾಪ್ತಿಯಲ್ಲಿ ಪ್ರವಾಹ ಇರುವದರಿಂದ ವಿದ್ಯುತ್ ಮಾರ್ಗ ದುರಸ್ತಿ ಸಾಧ್ಯವಾಗಿಲ್ಲ.

ವೀರಾಜಪೇಟೆ ತಾಲೂಕು ಸೆಸ್ಕ್ ಎಇಇ ಅಂಕಯ್ಯ ಮತ್ತು ಶ್ರೀಮಂಗಲ ಜೆ ಇ ವಿಜಯಕುಮಾರ್ ಅವರು ಮುಖ್ಯ ವಿದ್ಯುತ್ ಮಾರ್ಗದ ಹಾನಿ, ಮರು ಜೋಡಣೆಗೆ ಬಾಡಗರಕೇರಿ, ಬಿರುನಾಣಿ ಮಾರ್ಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಬಿರುನಾಣಿ- ಹುದಿಕೇರಿ ಸಂಪರ್ಕ ರಸ್ತೆ ಪೊರಾಡ್ ಗ್ರಾಮದಲ್ಲಿ ಬೃಹತ್ ಭೂಕುಸಿತದಿಂದ ಹಾನಿಯಾಗಿದ್ದು, ಇದರ ತೆರವಿಗೆ ಇದುವರೆಗೂ ಕಾರ್ಯಾಚರಣೆ ಆರಂಭವಾಗಿಲ್ಲ.

ಲಕ್ಷ್ಮಣತೀರ್ಥ ನದಿ ಪ್ರವಾಹ ಶ್ರೀಮಂಗಲದಲ್ಲಿ ಸಂಪೂರ್ಣ ಇಳಿಮುಖವಾಗಿದ್ದರೂ,ತಗ್ಗು ಪ್ರದೇಶದಲ್ಲಿ ಅಂದರೆ ನಿಟ್ಟೂರು, ದೇವನೂರು, ಕೊಟ್ಟಗೇರಿ, ಬಾಳೆಲೆ ವ್ಯಾಪ್ತಿಯಲ್ಲಿ ಭತ್ತದ ಗದ್ದೆಗಳು ಜಲಾವೃತ ವಾಗಿದೆ. ಮಲ್ಲೂರು-ಬಾಳೆಲೆ ನಡುವೆ ರಸ್ತೆ, ಸೇತುವೆ ಇನ್ನೂ ಸಹ ಮುಳುಗಡೆ ಆಗಿದ್ದು, ಸಂಪರ್ಕ ಕಡಿತವಾಗಿದೆ.