ಮಡಿಕೇರಿ, ಆ. 11: 8 ದಿನಗಳ ಕಾಲ ಭೋರ್ಗರೆದು ಭಾನುವಾರ ದಂದು ಮಳೆ ಮೌನವಾಗಿದ್ದರೂ, ಮಳೆ ನಿಂತಿದೆ ಎಂಬ ಭರವಸೆ ಇಲ್ಲದ ಜಿಲ್ಲೆಯ ಜನತೆ ಆತಂಕದಲ್ಲಿಯೇ ಇದ್ದಾರೆ. ಈ ನಡುವೆ ತಗ್ಗಿದ ಮಳೆ ಯಿಂದಾಗಿ, ಹಲವು ರಸ್ತೆ ಸಂಪರ್ಕಗಳು ಜೋಡಣೆಯಾಗಿದ್ದು, ವಾಹನ ಸಂಚಾರ ಆರಂಭವಾಗಿದೆ. ಸೋಮವಾರದ ವೇಳೆಗೆ ಬೇತ್ರಿ ಹಾಗೂ ಕುಶಾಲನಗರ ತಾವರೆಕೆರೆ ರಸ್ತೆಯಿಂದ ನೀರು ಕೆಳಕ್ಕಿಳಿದರೆ, ಜಿಲ್ಲೆಯ ಎಲ್ಲೆಡೆ ವಾಹನ ಹಾಗೂ ಜನ ಸಂಚಾರಕ್ಕೆ ಪೂರ್ಣ ಅನುಕೂಲವಾಗಲಿದ್ದು, ಜಿಲ್ಲೆ ಸ್ವಲ್ಪಮಟ್ಟಿಗೆ ಚೇತರಿಸಿಕೊಳ್ಳಲು ನೆರವಾಗಲಿದೆ.

ಭಾನುವಾರದಂದು ಕೊಡಗಿಗೆ ಸೂರ್ಯನ ದರ್ಶನ ಲಭ್ಯವಾದ ಹಿನ್ನೆಲೆಯಲ್ಲಿ ಜನತೆಯ ಮೊಗದಲ್ಲಿ ಮುಗುಳ್ನಗೆ ಕಂಡು ಬಂದಿತ್ತು. ಕುಶಾಲನಗರದ ಸೇತುವೆಯಿಂದ ಮೆಲ್ಲಗೆ ಇಳಿದಿದ್ದ, ‘ಕಾವೇರಿ’ಯನ್ನು ನೋಡಲು ನೂರಾರು ಸಂಖ್ಯೆಯಲ್ಲಿ ಜನ ಆಗಮಿಸಿದ್ದರು. ಮಧ್ಯಾಹ್ನದ ವೇಳೆಗೆ ಕೊಪ್ಪ ಸಂಪರ್ಕವೂ ಲಭ್ಯವಾದ್ದರಿಂದ ಅರ್ಧ ಅಡಿ ನೀರಿನ ಮೇಲೆ ದೊಡ್ಡ ಹಾಗೂ ಲಘುವಾಹನ ಗಳು ಸರಾಗವಾಗಿ ಸಂಚರಿಸಿದರೆ, ದ್ವಿಚಕ್ರ ವಾಹನಗಳು ಸರ್ಕಸ್ ಮಾಡಿಯೂ ಸಂತೃಪ್ತವಾದವು.

ಮೈಸೂರು-ಬೆಂಗಳೂರಿನತ್ತ ತೆರಳಬೇಕಾದ ವಾಹನಗಳು ಗುಡ್ಡೆಹೊಸೂರು ಹಾರಂಗಿ ಮೂಲಕ ಸಂಚರಿಸುತ್ತಿದ್ದ ಸಂದರ್ಭ ಹಾರಂಗಿಯ ಜಲ ವೈಭೋಗದ ಸವಿಗೆ ಕೆಲಕಾಲ ಬಿಡುವು ಪಡೆದರು. ಜಿಲ್ಲೆಯ ವಿವಿಧೆಡೆಗಳಿಂದಲೂ ಜನ ಹಾರಂಗಿಯತ್ತ ಧಾವಿಸಿ ಚುರುಮುರಿ, ಬೇಯಿಸಿದ ಜೋಳ, ಬಿಸಿ ಬಜ್ಜಿಯ ಸವಿಯುಂಡರು.

(ಮೊದಲ ಪುಟದಿಂದ)

ರಸ್ತೆಗಳ ತೊಡರು ನಿವಾರಣೆ ಯಿಂದಾಗಿ ಗೋಣಿಕೊಪ್ಪದಲ್ಲೂ ವ್ಯಾಪಾರ ವಹಿವಾಟು ಪುನರಾ ರಂಭಕ್ಕೆ ವರ್ತಕರು ಸಜ್ಜಾಗುತ್ತಿದ್ದಾರೆ. ಖಾಸಗಿ ಬಸ್ ಓಡಟವೂ ಆರಂಭಗೊಂಡಿದ್ದು, ಊರುಗಳು ‘ಉಸಿರಾಟ’ ಆರಂಭಿಸಿವೆ.

ಭಾಗಮಂಡಲದಲ್ಲೂ ನೀರಿನ ಪ್ರಮಾಣ ಇಳಿದಿದ್ದು, ಮಡಿಕೇರಿ ಸಂಪರ್ಕ ಪುನರಾರಂಭವಾಗಿದೆ. ಸೋಮವಾರ ನಾಪೋಕ್ಲು ರಸ್ತೆ ಕೂಡ ಜಲಾವೃತದಿಂದ ಬಿಡುಗಡೆ ಗೊಳ್ಳುತ್ತಿದೆ.

ಇವೆಲ್ಲದರ ನಡುವೆ ಕುಶಾಲನಗ ರದ ವಿವಿಧ ಬಡಾವಣೆಗಳಲ್ಲಿ ನೀರಿನ ಮಟ್ಟ ನಿಧಾನವಾಗಿ ಕಡಿಮೆಯಾಗು ತ್ತಿದ್ದು, ಅಲ್ಲಿನ ಜನತೆಯ ದುಗುಡ ಮಾತ್ರ ಹೆಚ್ಚಾಗುತ್ತಿದೆ. ಕಳಕೊಂಡ ಮನೆ ಸಾಮಗ್ರಿಗಳು, ಕಾಣೆಯಾದ ಪಶು ಪ್ರಾಣಿಗಳ ಬಗ್ಗೆ ಮರುಕಪಡುತ್ತಿದ್ದಾರೆ.

ಜಿಲ್ಲೆಯ ವಿವಿಧೆಡೆ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿರುವ ಸಹಸ್ರಾರು ಮಂದಿ ಮುಂದಿನ ಬದುಕಿನ ಬಗ್ಗೆ ಚಿಂತೆಗೀಡಾಗಿದ್ದಾರೆ. ಹಲವೆಡೆ ಸರಬರಾಜಿಗೆ ತರುವ ಕಂಬಳಿ ಹಾಗೂ ಇತರ ವಸ್ತುಗಳನ್ನು ಕೆಲವೇ ಕೆಲವು ಮಂದಿ ಹೊತ್ತೊಯ್ಯುತ್ತಿ ದ್ದಾರೆಂಬ ದೂರುಗಳು ಕೇಳಿ ಬರುತ್ತಿವೆ.

ಕೊಂಡಂಗೇರಿ-ಕೊಟ್ಟಮುಡಿ, ಕರಡಿಗೋಡು-ಸಿದ್ದಾಪುರ ವ್ಯಾಪ್ತಿ, ದಕ್ಷಿಣ ಕೊಡಗಿನ ವಿವಿಧೆಡೆಗಳಲ್ಲಿನ ನೈಜ ನಷ್ಟದ ಚಿತ್ರಣ ನೀರಿನ ಮಟ್ಟ ಸಂಪೂರ್ಣ ಇಳಿದ ಮೇಲಷ್ಟೇ ಲಭ್ಯವಾಗಲಿದೆ.

ಸ್ವಾಭಿಮಾನದ ಕೊಡಗು ಎಲ್ಲ ಅಡ್ಡಿ ಆತಂಕಗಳ ನಡುವೆಯೂ ಚೇತರಿಸಿಕೊಳ್ಳಲು ಯತ್ನಿಸುತ್ತಿದೆ ಎನ್ನುವದಷ್ಟೇ ಸಮಾಧಾನ.

-ಚಿದ್ದು