ಮಡಿಕೇರಿ, ಆ. 11: ಕಳೆದ ವರ್ಷ ಕೊಡಗಿನಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿದ ವೇಳೆ; ಇಲ್ಲಿನ ಜನತೆಯ ನೆರವಿಗಾಗಿ ಮುಖ್ಯಮಂತ್ರಿಗಳ ನಿಧಿಗೆ ಕರ್ನಾಟಕ ರಾಜ್ಯ ಸರಕಾರಿ ನೌಕರರು, ಸಂಘ ಸಂಸ್ಥೆಗಳು, ದಾನಿಗಳು ಸೇರಿದಂತೆ ರೂ. 198 ಕೋಟಿ ನೀಡಿದ್ದು; ಈ ಪೈಕಿ 100 ಕೋಟಿ ಖರ್ಚು ಮಾಡಿದ್ದು; 98 ಕೋಟಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯಲ್ಲಿ ಕಾಯ್ದಿರಿಸಲಾಗಿದೆ. ಈ ಮೊತ್ತ ಸಹಿತ ರಾಜ್ಯ ಸರಕಾರ ಕೂಡಲೇ ರೂ. 100 ಕೋಟಿಯನ್ನು ಜಿಲ್ಲೆಗೆ ಬಿಡುಗಡೆ ಮಾಡಬೇಕೆಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಕೊಡಗಿನಲ್ಲಿ ಪ್ರಾಕೃತಿಕ ವಿಕೋಪ ಸಂಬಂಧ ಇಂದು ವೀರಾಜಪೇಟೆ ತಾಲೂಕಿನ ಬೇಟೋಳಿ ಬಳಿಯ ರಾಮನಗರ, ವೀರಾಜಪೇಟೆಯ ಚಿಕ್ಕಪೇಟೆ ಹಾಗೂ ಕೊಂಡಂಗೇರಿಯ ಸಂತ್ರಸ್ತರ ಪರಿಹಾರ ಕೇಂದ್ರಗಳಿಗೆ ತೆರಳಿ ನೊಂದ ಕುಟುಂಬಗಳನ್ನು ಸಂತೈಸಿದ ಅವರು; ಬಳಿಕ ಇಲ್ಲಿನ ಮಯೂರ ವ್ಯಾಲಿವ್ಯೂನಲ್ಲಿ ಮಾದ್ಯಮದೊಂದಿಗೆ ಮಾತನಾಡಿದರು. ಆ ಮುನ್ನ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿ.ಪಂ. ಮುಖ್ಯಕಾರ್ಯ ನಿರ್ವಹಣಾಧಿಕಾರಿ ಕೆ. ಲಕ್ಷ್ಮೀಪ್ರಿಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಅವರುಗಳೊಂದಿಗೆ ಮಾಹಿತಿ ಪಡೆದುಕೊಂಡರು.
ಜಿಲ್ಲೆಯಲ್ಲಿ ಕಳೆದ ವರ್ಷದ ಪ್ರಾಕೃತಿಕ ವಿಕೋಪಕ್ಕಿಂತ ಈ ಬಾರಿ ಅಧಿಕ ಸಂಖ್ಯೆಯಲ್ಲಿ ಹಾನಿ ಸಂಭವಿಸು ವದರೊಂದಿಗೆ;
(ಮೊದಲ ಪುಟದಿಂದ) ಸಂತ್ರಸ್ತರು ಶಾಶ್ವತ ವ್ಯವಸ್ಥೆಗಾಗಿ ಹಂಬಲಿಸುತ್ತಿದ್ದಾರೆ ಎಂದು ಬೊಟ್ಟು ಮಾಡಿದ ಮಾಜಿ ಮುಖ್ಯಮಂತ್ರಿಗಳು, ಕಳೆದ ಬಾರಿ ಕೊಡಗಿನಲ್ಲಿ ಮಾತ್ರ ಪರಿಸ್ಥಿತಿ ಹದಗೆಟ್ಟು ಎಲ್ಲೆಡೆಯಿಂದ ನೆರವು ಲಭಿಸಿದ್ದಾಗಿ ನೆನಪಿಸಿದರು. ಆದರೆ ಈ ಬಾರಿ ರಾಜ್ಯದೆಲ್ಲೆಡೆ ಪ್ರಾಕೃತಿಕ ವಿಕೋಪ ಎದುರಾಗಿರುವ ಹಿನ್ನೆಲೆ; ಜಿಲ್ಲೆಯ ಜನರ ಸಂಕಷ್ಟ ಅಷ್ಟಾಗಿ ಬೆಳಕಿಗೆ ಬಾರದಾಗಿದೆ ಎಂದು ಅಭಿಪ್ರಾಯಪಟ್ಟರು.
ಇಂದು ತಾವು ಅನಾರೋಗ್ಯದಿಂದ ಹೆಚ್ಚಿನ ಕಡೆ ಭೇಟಿ ನೀಡಲು ಸಾಧ್ಯವಾಗಲಿಲ್ಲವೆಂದ ಅವರು; ಇನ್ನೆರಡು ವಾರಗಳಲ್ಲಿ ಕೊಡಗಿಗೆ ಭೇಟಿಯೊಂದಿಗೆ ಸಾಕಷ್ಟು ಕಡೆಗಳಲ್ಲಿ ಪ್ರವಾಸ ಹಮ್ಮಿಕೊಂಡು ಜನತೆಯನ್ನು ಸಂತೈಸಲು ತೀರ್ಮಾನಿಸಿರುವದಾಗಿ ವಿವರಿಸಿದರು.
ಜಿಲ್ಲಾಧಿಕಾರಿಗಳಿಗೆ ಸಲಹೆ : ಈಗಾಗಲೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ತೀವ್ರ ಮುಂಗಾರುವಿನ ಪರಿಣಾಮ; ಎದುರಾಗಿರುವ ಪರಿಸ್ಥಿತಿ ನಿಭಾಯಿಸಲು ಯಾವದೇ ರಾಜಕೀಯ ಮಾಡದೆ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು, ರಾಜ್ಯ ಸರಕಾರದ ಮುಖ್ಯಕಾರ್ಯದರ್ಶಿಗಳಿಗೆ ಸಲಹೆ ನೀಡುತ್ತಿರುವೆ ಎಂದರಲ್ಲದೆ, ಕೊಡಗಿನ ಪರಿಸ್ಥಿತಿ ಬಗ್ಗೆ ಅಗತ್ಯಬಿದ್ದರೆ, ಈಗಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೂ ಸಲಹೆಗಳನ್ನು ನೀಡುವದಾಗಿ ಮಾರ್ನುಡಿದರು.
ಹೆಚ್ಚಿನ ಮನೆ ಅಗತ್ಯ : ಕಳೆದ ವರ್ಷ ಪ್ರಾಕೃತಿಕ ಹಾನಿಯಿಂದ ಸಂಕಷ್ಟಕ್ಕೆ ಒಳಗಾದವರಿಗೆ 110 ಎಕರೆ ನಿವೇಶನ ಗುರುತಿಸಿ; 433 ಮನೆಗಳನ್ನು ನಿರ್ಮಿಸಲು ಕ್ರಮ ವಹಿಸಲಾಗಿದೆ ಎಂದ ಅವರು; ಈಗಿನ ಸ್ಥಿತಿಯಲ್ಲಿ ಕೊಡಗಿನ ಸಾವಿರಾರು ಮಂದಿಗೆ ಶಾಶ್ವತ ಮನೆಗಳ ಅಗತ್ಯವಿದೆ ಎಂದು ಬೊಟ್ಟು ಮಾಡಿದರು.
ಪರ್ಯಾಯ ಜಾಗ ಅವಶ್ಯಕ : ಆ ದಿಸೆಯಲ್ಲಿ ಜಿಲ್ಲಾಡಳಿತ ಮತ್ತು ಸರಕಾರ ಪರ್ಯಾಯ ಜಾಗ ಗುರುತಿಸಿ; ಸಮಯ ವಿಳಂಬ ಮಾಡದೆ ಕ್ರಿಯಾಯೋಜನೆ ರೂಪಿಸಿ ತಮಗೆ ಸಲ್ಲಿಸಲು ಜಿಲ್ಲಾಧಿಕಾರಿ ಬಳಿ ತಿಳಿಸಿರುವದಾಗಿ ನುಡಿದ ಅವರು; ತಾವು ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಚರ್ಚಿಸುವದಾಗಿ ಭರವಸೆ ನೀಡಿದರು.
ಜಿಲ್ಲಾಡಳಿತಕ್ಕೆ ಶ್ಲಾಘನೆ : ಕಳೆದ ವರ್ಷ ಎದುರಾಗಿದ್ದ ಪ್ರಾಕೃತಿಕ ವಿಕೋಪ ನಿರ್ವಹಣೆಯ ಅನುಭವದೊಂದಿಗೆ; ಜಿಲ್ಲಾಡಳಿತ ಸಾಕಷ್ಟು ಮುಂಚಿತವಾಗಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದರಿಂದ ಪ್ರಸಕ್ತ ಸಾಕಷ್ಟು ಅನಾಹುತ ತಪ್ಪಿದಂತಾಗಿದೆ ಎಂದು ಅನಿಸಿಕೆ ವ್ಯಕ್ತಪಡಿಸಿದರಲ್ಲದೆ; ಈ ಬಗ್ಗೆ ಕೊಡಗಿನ ಅಧಿಕಾರಿಗಳನ್ನು ಅಭಿನಂದಿಸುವದಾಗಿ ಮಾಜಿ ಮುಖ್ಯಮಂತ್ರಿ ಶ್ಲಾಘನೆಯ ನುಡಿಯಾಡಿದರು.
ತುರ್ತು ನೆರವು ಅವಶ್ಯ : ಕಳೆದ ವರ್ಷ ತಮ್ಮ ಸರಕಾರ ಸಂತ್ರಸ್ತ ಕುಟುಂಬಗಳಿಗೆ ತಲಾ ರೂ.11000 ಮೊತ್ತದೊಂದಿಗೆ ಗೃಹೋಪಯೋಗಿ ವಸ್ತುಗಳಿಗಾಗಿ ರೂ. 50 ಸಾವಿರ ಆರ್ಥಿಕ ನೆರವು ಮತ್ತು ರೂ. 9 ಲಕ್ಷದ ಮನೆ ಕಲ್ಪಿಸಿದ್ದು; ಅದೇ ರೀತಿ ಈಗಿನ ಸರಕಾರವೂ ಕೂಡಲೇ ಪರಿಹಾರ ನೀಡಬೇಕೆಂದು ಸಲಹೆ ನೀಡಿದರು. ಅಲ್ಲದೆ ಲೋಕೋಪಯೋಗಿ ಮತ್ತು ಗ್ರಾಮೀಣ ರಸ್ತೆಗಳ ರಿಪೇರಿಗೆ ಕ್ರಮವಹಿಸಲು ಸರಕಾರವನ್ನು ಒತ್ತಾಯಿಸಿದರು. ಈ ವೇಳೆ ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ್ , ಟಿ. ನರಸೀಪುರ ಶಾಸಕ ಅಶ್ವಿನ್, ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್ ಮೊದಲಾದವರು ಹಾಜರಿದ್ದರು. ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ವಿ. ಸ್ನೇಹಾ, ಉಪವಿಭಾಗಾಧಿಕಾರಿ ಟಿ. ಜರವೇಗೌಡ ಮೊದಲಾದವರು ಉಪಸ್ಥಿತರಿದ್ದು, ಮಾಹಿತಿ ಒದಗಿಸಿದರು.