ಮಡಿಕೇರಿ, ಆ.11: ಮಳೆ ಹಾನಿ ಪರಿಹಾರ ಸಂಬಂಧ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿ.ಅನ್ಬುಕುಮಾರ್ ಅಧ್ಯಕ್ಷತೆಯಲ್ಲಿ, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿ.ಪಂ.ಸಿಇಒ ಕೆ.ಲಕ್ಷ್ಮಿಪ್ರಿಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್ ಉಪಸ್ಥಿತಿಯಲ್ಲಿ ಇಂದು ಸಭೆ ನಡೆಯಿತು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅನ್ಬುಕುಮಾರ್ ಅವರು ಧಾರಾಕಾರ ಮಳೆಯಿಂದ ಭೂ ಕುಸಿತ ಉಂಟಾಗಿ 7 ಮಂದಿ ಜೀವ ಕಳೆದುಕೊಂಡಿದ್ದಾರೆ. ಈ ಕುಟುಂಬದವರಿಗೆ ತಕ್ಷಣವೇ ಪರಿಹಾರ ನೀಡುವಂತೆ ಉಪ ವಿಭಾಗಾಧಿಕಾರಿ ಅವರಿಗೆ ಸೂಚಿಸಿದರು. ಪ್ರಕೃತಿ ವಿಕೋಪ ಮಾರ್ಗಸೂಚಿಯಂತೆ ದಿನಬಳಕೆ ಸಾಮಗ್ರಿಗಳನ್ನು ಕಳೆದುಕೊಂಡ ಕುಟುಂಬದವರಿಗೆ 3800.ರೂ. ಪರಿಹಾರ ಒದಗಿಸುವಂತೆ ನಿರ್ದೇಶನ ನೀಡಿದರು.

ಮಳೆಗಾಲದ ಸಂದರ್ಭದಲ್ಲಿ ಅತ್ಯಗತ್ಯವಾಗಿ ಬೇಕಿರುವ ಬೋಟ್ ಹಾಗೂ ರ್ಯಾಪ್ಟ್‍ಗಳನ್ನು ಹೆಚ್ಚುವರಿಯಾಗಿ ತರಿಸಿಕೊಳ್ಳುವದು, ಅಗತ್ಯ ವಾಹನ ಗಳನ್ನು ವ್ಯವಸ್ಥೆ ಮಾಡಿಕೊಳ್ಳುವಂತೆ, ಕೃಷಿ, ತೋಟಗಾರಿಕೆ ಕಾಫಿ ಮತ್ತಿತ್ತರ ಬೆಳೆ ನಷ್ಟದ ಅಂದಾಜು ಪಟ್ಟಿ ಸಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಭೂ ಕುಸಿತದಿಂದ ಜೀವ ಕಳೆದುಕೊಂಡ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ಜೊತೆಗೆ ಪ್ರಧಾನಮಂತ್ರಿಯವರ ಪರಿಹಾರ ನಿದಿಯಿಂದ 2 ಲಕ್ಷ ರೂ ಪರಿಹಾರ ನೀಡಲಾಗುತ್ತದೆ. ಈ ಪರಿಹಾರ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಹಾಗೆಯೇ ಗಾಯಗೊಂಡವರಿಗೆ ಪರಿಹಾರ ಒದಗಿಸಲು ಅವಕಾಶವಿದ್ದು, ಅಗತ್ಯ ಕ್ರಮಕೈಗೊಳ್ಳುವಂತೆ ಕಂದಾಯ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಪರಿಹಾರ ಕೇಂದ್ರದಲ್ಲಿನ ಸಂತ್ರಸ್ತರಿಗೆ ಆಹಾರ ಕಿಟ್ ವಿತರಣೆ, ಮತ್ತಿತರ ಬಗ್ಗೆ ಮಾಹಿತಿ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸಿ.ವಿ ಸ್ನೇಹಾ, ಉಪ ವಿಭಾಗಧಿಕಾರಿ ಟಿ.ಜವರೆಗೌಡ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರಾಜು, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಚಂದ್ರಶೇಖರ್, ಕಾಫಿ ಮಂಡಳಿಯ ಉಪ ನಿರ್ದೇಶಕ ಶಿವಕುಮಾರ ಸ್ವಾಮಿ (ಮಡಿಕೇರಿ), ಸತೀಶ್ ಚಂದ್ರ (ವೀರಾಜಪೇಟೆ), ಪಿ.ಶಿವಪ್ರಸಾದ್ (ಚೆಟ್ಟಳ್ಳಿ), ಐಎಎಸ್ ಮತ್ತು ಕೆಎಎಸ್ ಪ್ರೊಬೇಷನರಿ ಅಧಿಕಾರಿಗಳು ಇತರರು ಇದ್ದರು.

ನೋಡಲ್ ಅಧಿಕಾರಿಗಳ ನೇಮಕ

ಜಿಲ್ಲೆಯಲ್ಲಿ ಇತ್ತಿಚಿನ ದಿನಗಳಲ್ಲಿ ಮಳೆಯಾಗುತ್ತಿರುವದರಿಂದ ಹೊಳೆ, ನದಿಗಳು ಉಕ್ಕಿ ಹರಿಯುತ್ತಿದ್ದು, ಕೆರೆ ಅಣೆಕಟ್ಟೆಗಳು ತುಂಬುತ್ತಿವೆ. ಹಲವಾರು ಕಡೆ ರಸ್ತೆ ಸಂಪರ್ಕಗಳು ಕಡಿತಗೊಂಡಿದ್ದು, ವಿದ್ಯುತ್ ಸಂಪರ್ಕದಲ್ಲಿ ಸಹ ಹೆಚ್ಚಿನ ಪ್ರಮಾಣದ ಅಡಚಣೆ ಉಂಟಾಗಿದೆ.

ಹಲವು ಕಡೆ ಕಂಬಗಳು, ವಿದ್ಯುತ್ ಪರಿವರ್ತಕಗಳು ಮುರಿದು ಬಿದ್ದಿದ್ದು, ವಿದ್ಯುತ್ ಮಾರ್ಗಗಳ ಸಮನಾಂತರಕ್ಕೆ ನೀರಿನ ಹರಿವು ಇರುವದರಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಕೆಲವೊಂದು ಕಡೆಗಳಲ್ಲಿ ಮಳೆಯ ಪ್ರಮಾಣ ಗಮನದಲ್ಲಿಟ್ಟುಕೊಂಡು ಮುನ್ನೆಚ್ಚರಿಕೆ ಕ್ರಮವಾಗಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗಿದೆ. ಹೆಚ್ಚು ಹಾನಿಗೊಳಗಾಗಿರುವ ಪ್ರದೇಶಗಳಿಗೆ ಬೇರೆ ಸ್ಥಳಗಳಿಂದ ಈಗಾಗಲೇ ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಪ್ರವಾಹವು ಇಳಿಮುಖವಾಗಿರುವ ಪ್ರದೇಶಗಳಲ್ಲಿ ದುರಸ್ತಿ ಕಾರ್ಯ ಕೈಗೆತ್ತಿಗೊಂಡಿದೆ.

ಆ ದಿಸೆಯಲ್ಲಿ ವಿದ್ಯುತ್ ಸರಬರಾಜು ಸಂಬಂಧ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಕೊಡಗು-ಚಾಮರಾಜನಗರ ಜಿಲ್ಲೆಗಳ ಅಧೀಕ್ಷಕ ಇಂಜಿನಿಯರ್ ಕೆ.ಎಂ.ಮಹದೇವಸ್ವಾಮಿ ಪ್ರಸನ್ನ (9449598533). ಮಡಿಕೇರಿ, ವೀರಾಜಪೇಟೆ ಮತ್ತು ಸೋಮವಾರಪೇಟೆ ತಾಲೂಕಿಗೆ ಕಾರ್ಯಪಾಲಕ ಎಂಜಿನಿಯರ್ ಬಿ. ಸೋಮಶೇಖರ್ (9449598601) ಅವರನ್ನು ನೇಮಿಸಲಾಗಿದೆ. ಸಾರ್ವಜನಿಕರು ವಿದ್ಯುತ್ ಸರಬರಾಜು ಸಮಸ್ಯೆಗಳಿಗೆ ಸಂಬಂಧಿಸಿದಂತೆ ನೋಡಲ್ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಪ್ರಧಾನ ವ್ಯವಸ್ಥಾಪಕರು ತಿಳಿಸಿದ್ದಾರೆ.