ಗೋಣಿಕೊಪ್ಪಲು, ಆ. 11: ಪೊನ್ನಂಪೇಟೆ ಹೋಬಳಿಯ ಗೋಣಿಕೊಪ್ಪಲು ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರದ ವತಿಯಿಂದ ತೆರೆಯಲಾಗಿರುವ ಪರಿಹಾರ ಕೇಂದ್ರದಲ್ಲಿ ಸವಲತ್ತುಗಳನ್ನು ಪಡೆಯಲು ಮುಗಿಬೀಳುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತ ತಾಲೂಕು ಆಡಳಿತ ಭಾನುವಾರ ಬೆಳಿಗ್ಗೆಯಿಂದ ಸರ್ಕಾರದ ಸವಲತ್ತುಗಳು ಅನ್ಯರ ಪಾಲಾಗುವದನ್ನು ತಪ್ಪಿಸಲು ಪೊನ್ನಂಪೇಟೆ ರೆವಿನ್ಯೂ ಅಧಿಕಾರಿಗಳಾದ ರಾಧಕೃಷ್ಣ ರವರು ಇಂದು ಕಿರಿಯ ಅಧಿಕಾರಿಗಳ ತುರ್ತು ಸಭೆ ನಡೆಸಿ ಗ್ರಾಮಲೆಕ್ಕಿಗರ ಮುಂದಾಳತ್ವದಲ್ಲಿ ಗ್ರಾಮ ಲೆಕ್ಕಿಗ, ಪಿಡಿಒ, ಪಂಚಾಯಿತಿ ಬಿಲ್ ಕಲೆಕ್ಟರ್, ಪೊಲೀಸ್ ಸಿಬ್ಬಂದಿ, ಹಾಗೂ ಪಂಚಾಯಿತಿ ಸದಸ್ಯರ ತಂಡ ರಚಿಸಿದರು. ಈ ತಂಡವು ಮಳೆಯಿಂದ ಹಾನಿಗೊಳಗಾದ ಪ್ರತಿ ಮನೆಗಳಿಗೆ ತೆರಳಿ ಪೋಟೋ ಸಹಿತ ನಷ್ಟ ಗೊಂಡಿರುವವರ ವಿವರ ಸಂಗ್ರಹಿಸುವಂತೆ ಸೂಚನೆ ನೀಡಿದರು.
ಅಧಿಕಾರಿಗಳ ಸೂಚನೆಯಂತೆ ಅರುವತ್ತೊಕ್ಕಲು ಗ್ರಾಮಲೆಕ್ಕಿಗರಾದ ಮಂಜುನಾಥ್ ನೇತೃತ್ವದಲ್ಲಿ ಪಿಡಿಒ ಶ್ರೀನಿವಾಸ್, ಪಂಚಾಯಿತಿ ಸಿಬ್ಬಂದಿ ನವೀನ್, ವಿವಿಧ ವಾರ್ಡ್‍ನ ಪಂಚಾಯಿತಿ ಸದಸ್ಯರು ಗೋಣಿಕೊಪ್ಪಲುವಿನ ವಿವಿಧ ಭಾಗದಲ್ಲಿ ನೆರೆಹಾವಳಿಯಿಂದ ಮನೆಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು.
ಈ ಸಂದರ್ಭದಲ್ಲಿ ಏನು ಅನಾಹುತ ಸಂಭವಿಸದೆ ಇದ್ದರೂ ಸರಕಾರಿ ಪ್ರಯೋಜನ ಪಡೆಯಲು ಪರಿಹಾರ ಕೇಂದ್ರದಲ್ಲಿ ಸುಳ್ಳು ಮಾಹಿತಿ ನೀಡಿ ಹೆಸರು ನೊಂದಾವಣೆ ಮಾಡಿಕೊಂಡಿರುವ ಕೆಲವರ ಮಾಹಿತಿ ತಿಳಿದುಬಂದಿದೆ.
ಯಾವದೇ ಮನೆ, ಮಠ ಇಲ್ಲದೆ ಬಸ್ ನಿಲ್ದಾಣದಲ್ಲಿ ಉಳಿದುಕೊಂಡು ಸಮಯ ಕಳೆಯುತ್ತಿರುವವರು ಎರಡನೇ ವಿಭಾಗದಲ್ಲಿ ಮನೆ ಇದೆ ಎಂಬ ಸುಳ್ಳು ಮಾಹಿತಿಗಳು ಹೊರಬಿದ್ದವು.
ಎರಡನೇ ವಾರ್ಡ್‍ನ ಕೀರೆಹೊಳೆ ಬದಿಯಲ್ಲಿ ವಾಸಿಸಲು ಯೋಗ್ಯವಿಲ್ಲ ಎಂಬ ಜಿಲ್ಲಾಧಿಕಾರಿಗಳ ಸ್ಪಷ್ಟ ಆದೇಶವಿದ್ದರು ಈ ಆದೇಶವನ್ನು ಧಿಕ್ಕರಿಸಿ ಗುಡಿಸಲು ಕಟ್ಟಿಕೊಂಡು ಜೀವನ ಸಾಗಿಸುತ್ತಿರುವ ಆನೇಕ ಕುಟುಂಬಗಳು ಹಾಗೂ 6ನೇ ವಿಭಾಗದ ಸೇತುವೆಯ ಬಳಿಯಲ್ಲಿ ವಾಸವಿರುವ ಕೆಲವು ಕುಟುಂಬಗಳು ಎಚ್ಚೆತ್ತುಕೊಂಡಿದ್ದು ಜಿಲ್ಲಾಡಳಿತ ಬದಲಿ ವ್ಯವಸ್ಥೆ ಕಲ್ಪಿಸುವ ಸ್ಥಳಗಳಿಗೆ ಹೋಗುವದಾಗಿ ಸರ್ವೇ ಕಾರ್ಯಕ್ಕೆ ತೆರಳಿದ ಅಧಿಕಾರಿಗಳ ಮುಂದೆ ತಮ್ಮ ಅಹವಾಲು ಸಲ್ಲಿಸಿದರು.
ಎರಡನೇ ವಿಭಾಗದ ಬೆರಳಣಿಕೆ ಮಂದಿ ಹೊರತು ಪಡಿಸಿ ಬಹುತೇಕ ಗುಡಿಸಲುವಾಸಿಗಳು ಬದಲಿ ವ್ಯವಸ್ಥೆಗೆ ಮನವಿ ಮಾಡಿದರು.
ಆನೇಕ ಮನೆಯಲ್ಲಿ ಮಳೆ ನೀರು ತುಂಬಿದ ಪರಿಣಾಮ ಮನೆಯಲ್ಲಿದ್ದ ಆಹಾರ ಧಾನ್ಯಗಳು ಸೇರಿದಂತೆ ಟಿ.ವಿ., ಫ್ರಿಡ್ಜ್, ಫ್ಯಾನ್, ಹಾಸಿಗೆ ಹಾಳಾಗಿರುವದು ಕಂಡು ಬಂತು.
ನಗರದ ಪೊನ್ನಂಪೇಟೆ ರಸ್ತೆ ಯಲ್ಲಿ ಹಿರಿಯ ನಾಗರಿಕರಾದ ವಿನೋದ್ ವಕ್ರ್ಸ್‍ನ ರಾಮಾಚಾರಿ ಅವರ ಬೆಲೆಬಾಳುವ ಮಿಷಿನರಿ, ಮೋಟಾರುಗಳು ಹಾನಿಯಾಗಿದ್ದು 5 ಲಕ್ಷ ಮೌಲ್ಯದ ವಸ್ತುಗಳು ಹಾಳಾಗಿವೆ ಎಂಬ ಮಾಹಿತಿ ಒದಗಿಸಿದರು.
ಸಮೀಪದ ಫುಡ್ ಬ್ಯಾಂಕ್ ಸೂಪರ್ ಮಾರ್ಕೆಟ್ ಒಳಗೆ ನೀರು ತುಂಬಿದ ಪರಿಣಾಮ ಅಂದಾಜು 10 ಲಕ್ಷದ ಆಹಾರ ಪದಾರ್ಥಗಳು ನಷ್ಟ ಗೊಂಡಿರುವದಾಗಿ ಅಧಿಕಾರಿಗಳಿಗೆ ತಿಳಿಸಿದರು.
ಬಹುತೇಕ ಮನೆಗಳಿಗೆ ತುಂಬಿದ ನೀರು ಇನ್ನೂ ಕಡಿಮೆಯಾಗಿಲ್ಲ.ಕೆಸರು ಮಣ್ಣು ಮನೆಯ ಒಳಗೆ ಸೇರಿಕೊಂಡು ಇದನ್ನು ಶುಚಿಗೊಳಿಸುವದೇ ಮನೆಯವರಿಗೆ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಸಂತ್ರಸ್ತರಿಗೆ ಪರಿಹಾರ ಕೇಂದ್ರದಲ್ಲಿ ಸಮಯಕ್ಕೆ ಸರಿಯಾಗಿ ಊಟದ ವ್ಯವಸ್ಥೆ, ಸ್ಥಳೀಯ ಆಸ್ಪತ್ರೆಯ ನುರಿತ ವೈದ್ಯರಿಂದ ವ್ಯೆದಕೀಯ ತಪಾಸಣೆ ಮಾಡಿಸಲಾಗುತ್ತಿದೆ. ತಾಲೂಕು ವ್ಯೆದ್ಯಾದಿಕಾರಿ ಡಾ. ಯತಿರಾಜ್ ಖುದ್ದಾಗಿ ಭೇಟಿ ನೀಡುವ ಮೂಲಕ ಕೇಂದ್ರದಲ್ಲಿ ಇರುವ ಸಂತ್ರಸ್ತರ ಆರೋಗ್ಯ ಪರೀಕ್ಷೆ ನಡೆಸಿದರು. ಡಾಕ್ಟರ್ ಗ್ರೀಷ್ಮ, ಸಿಬ್ಬಂದಿ ಹಾಜರಿದ್ದರು. ಎರಡು ಪರಿಹಾರ ಕೇಂದ್ರದಲ್ಲಿ ಸುಮಾರು 350 ಮಂದಿಗೆ ಪ್ರತಿ ನಿತ್ಯದ ಊಟದ ವ್ಯವಸ್ಥೆ ನಡೆಯುತ್ತಿದೆ. ಕೆಲವು ದಾನಿಗಳು ಹಾಲು, ಬನ್, ಬ್ರೆಡ್, ಮೊಟ್ಟೆ ವಿತರಣೆ ಮಾಡಿದರು.
ಕೆಲವು ಗ್ರಾಮ ಪಂಚಾಯಿತಿ ಸದಸ್ಯರು ಹೊರತು ಪಡಿಸಿದ್ದಲ್ಲಿ ಬಹುತೇಕ ಸದಸ್ಯರು ಇನ್ನೂ ಕೂಡ ಭೇಟಿ ನೀಡಿಲ್ಲ.
ಸಮಾಜ ಸೇವಕರಾದ ಗಣೇಶ್ ರೈ ಹಾಗೂ ಕೆಲವು ಸ್ನೇಹಿತರು ಸಂತ್ರಸ್ತರಿಗೆ ಸಹಾಯವಾಗುವ ನಿಟ್ಟಿನಲ್ಲಿ ಕೇಂದ್ರ ದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮಳೆರಾಯ ತುಸು ಬಿಡುವು ನೀಡಿದ್ದು ಸೂರ್ಯನ ಬೆಳಕಿನಲ್ಲಿ ಮಹಿಳೆಯರು ತಮ್ಮ ಮನೆಯ ಬಟ್ಟೆಗಳನ್ನು ಒಣಗಿಸಿ ಕೊಳ್ಳುತ್ತಿದ್ದದ್ದು ಕಂಡು ಬಂತು.
-ಚಿತ್ರ, ವರದಿ: ಹೆಚ್.ಕೆ. ಜಗದೀಶ್