ಮಡಿಕೇರಿ, ಆ. 10: ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಕಾಲೇಜಿನ ನೂತನ ಪ್ರಾಂಶುಪಾಲ ಡಾ. ಚೌರೀರ ಜಗತ್ ತಿಮ್ಮಯ್ಯ ಅವರನ್ನು ಭೇಟಿ ಮಾಡಿ, ಚಟುವಟಿಕೆ ಹಮ್ಮಿಕೊಳ್ಳುವ ಬಗ್ಗೆ ಮಾತುಕತೆ ನಡೆಸಲಾಯಿತು.

ಈ ಸಂದರ್ಭ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಡಾ. ಪಾರ್ವತಿ ಅಪ್ಪಯ್ಯ, ಕಾರ್ಯದರ್ಶಿ ಬೊಳ್ಳಜಿರ ಬಿ. ಅಯ್ಯಪ್ಪ, ನಿರ್ದೇಶಕರಾದ ನಂದಿನೆರವಂಡ ಎ. ಅಪ್ಪಯ್ಯ, ಬಿ.ಕೆ. ನಂಜಪ್ಪ ಮತ್ತು ತಾರಾ ಮುದ್ದಯ್ಯ ಇದ್ದರು. ಇದೇ ಸಂದರ್ಭ ನಡೆದ ವಿದ್ಯಾರ್ಥಿ ಸಂಘದ ಸಭೆಯಲ್ಲಿ ಹಳೆ ವಿದ್ಯಾರ್ಥಿ ಸಂಘದ ಆಡಳಿತ ಮಂಡಳಿಗೆ ನೂತನ ನಿರ್ದೇಶಕರುಗಳಾಗಿ ಕಿಶೋರ್ ರೈ ಕತ್ತಲೆಕಾಡು ಹಾಗೂ ವಿಘ್ನೇಶ್ ಎಂ. ಭೂತನಕಾಡು ಅವರನ್ನು ಆಯ್ಕೆ ಮಾಡಲಾಯಿತು.

ಮುಂದಿನ ದಿನದಲ್ಲಿ ನೂತನ ಪ್ರಾಂಶುಪಾಲರ ಸಹಕಾರದೊಂದಿಗೆ ಕಾಲೇಜಿನಲ್ಲಿ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕಾರ್ಯಕ್ರಮವನ್ನು ಆಯೋಜಿಸುವದು, ಸಂಘದ ಸದಸ್ಯತ್ವ ಹೆಚ್ಚಿಸುವದು, ಕಾಲೇಜಿನ ಅಭಿವೃದ್ಧಿಗೆ ಕೈಜೋಡಿಸುವ ನಿಟ್ಟಿನಲ್ಲಿ ಸಂಘ ವಹಿಸಬೇಕಾದ ಕಾರ್ಯಗಳ ಬಗ್ಗೆಯೂ ಚರ್ಚೆ ನಡೆಸಲಾಯಿತು.