ಸೋಮವಾರಪೇಟೆ, ಆ. 10: ಪ್ರವಾಹ ಪೀಡಿತ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಹಲವಷ್ಟು ಗ್ರಾಮಗಳಿಗೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಖುದ್ದು ಭೇಟಿ ನೀಡಿ ಪರಿಶೀಲಿಸಿದರಲ್ಲದೇ, ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ತಾಲೂಕಿನ ಕೂಡಿಗೆ ಗ್ರಾಮದಲ್ಲಿ ಹಾರಂಗಿ ಹೊಳೆ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು ಹೊಳೆ ಪಾತ್ರದ ಮನೆಗಳಿಗೆ ನೀರು ನುಗ್ಗಿರುವ ದನ್ನು ಪರಿಶೀಲಿಸಿದ ಶಾಸಕರು, ಸಾಂತ್ವಾನ ಕೇಂದ್ರಗಳಿಗೆ ತೆರಳುವಂತೆ ಸೂಚಿಸಿದರು.

ಕೂಡಿಗೆ ವ್ಯಾಪ್ತಿಯಲ್ಲಿ ಮುಳುಗಡೆಯಾಗಿರುವ ಮನೆಗಳು, ಪ್ರವಾಹದಿಂದ ಬಾಧಿಸಲ್ಪಟ್ಟಿರುವ ಸಾರ್ವಜನಿಕರ ಮಾಹಿತಿಯನ್ನು ತಾಲೂಕು ಕಚೇರಿಗೆ ಸಲ್ಲಿಸುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಶ್ವಿನಿ ಅವರಿಗೆ ನಿರ್ದೇಶನ ನೀಡಿದರು.

ಪರಿಹಾರ ಕೇಂದ್ರಗಳಲ್ಲಿ ಅಗತ್ಯ ವಸ್ತುಗಳನ್ನು ದಾಸ್ತಾನಿರಿಸುವಂತೆ, ಸಂತ್ರಸ್ತರಿಗೆ ಎಲ್ಲಾ ರೀತಿಯ ನೆರವು ಒದಗಿಸುವಂತೆ ತಾಲೂಕು ತಹಶೀಲ್ದಾರ್ ಗೋವಿಂದರಾಜು ಅವರಿಗೆ ಸೂಚಿಸಿದರು.

ನಂತರ ಸಂಪೂರ್ಣ ಮುಳುಗಡೆ ಯಾಗಿರುವ ಕುಶಾಲನಗರದ ಸಾಯಿ ಬಡಾವಣೆಗೆ ಭೇಟಿ ನೀಡಿ, ಮುಳುಗಡೆ ಯಾಗಿರುವ ಮನೆಗಳ ನಿವಾಸಿಗಳನ್ನು ಭೇಟಿ ಮಾಡಿದರು. ಮನೆಯ ಸಾಮಗ್ರಿ ಗಳನ್ನು ತೆರವುಗೊಳಿಸಲು ತೆಪ್ಪವನ್ನು ಒದಗಿಸುವದಾಗಿ ತಿಳಿಸಿದರು.

ವಿವೇಕಾನಂದ ಬಡಾವಣೆಗೆ ಕಾವೇರಿ ನದಿ ನೀರು ನುಗ್ಗಿ 45ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದ್ದು, ಬಡ ಮಂದಿ ತೀರಾ ಸಂಕಷ್ಟಕ್ಕೆ ಈಡಾಗಿರುವ ಪರಿಸ್ಥಿತಿಯನ್ನು ಅವಲೋಕಿಸಿದರು.

ಕುವೆಂಪು ಬಡಾವಣೆ, ತಮ್ಮಣ್ಣಶೆಟ್ಟಿ ಬಡಾವಣೆ, ಗುಮ್ಮನಕೊಲ್ಲಿ 2ನೇ ವಾರ್ಡ್, ಕೂಡ್ಲೂರು, ರಸೂಲ್ ಬಡಾವಣೆಗಳಲ್ಲಿ ಮುಳುಗಡೆಯಾಗಿ ರುವ ಪ್ರದೇಶಗಳನ್ನು ವೀಕ್ಷಿಸಿದರು. ಪ್ರವಾಹ ಪರಿಸ್ಥಿತಿಯಲ್ಲಿ ಕೈಗೊಳ್ಳ ಬೇಕಾದ ಅಗತ್ಯ ಕ್ರಮಗಳ ಕುರಿತು ಕುಶಾಲನಗರ ಪ.ಪಂ. ಮುಖ್ಯಾಧಿಕಾರಿ ಸುಜಯ್ ಅವರೊಂದಿಗೆ ಮಾತುಕತೆ ನಡೆಸಿದರು.

ನಂತರ ಸಂಚಾರ ಸ್ಥಗಿತಗೊಂಡಿ ರುವ ಕೊಪ್ಪ ಸೇತುವೆಯ ಸಮೀಪ ಪರಿಶೀಲನೆ ನಡೆಸಿದರು. ಈ ಸಂದರ್ಭ ನೀರಿನಲ್ಲಿ ಸಿಲುಕಿದ್ದ 2 ಕಾರು, 1 ಆಟೋಗಳನ್ನು ಶಾಸಕರ ನೇತೃತ್ವದ ಕ್ಷಿಪ್ರ ಕಾರ್ಯಪಡೆಯ ಯುವಕರು ದಡಕ್ಕೆ ತಂದರು. ನಂತರ ತಾವರೆಕೆರೆ ಯಿಂದ ಮಾದಾಪಟ್ಟಣದ ಮಧ್ಯದಲ್ಲಿ ಮುಳುಗಡೆಯಾಗಿರುವ ಎರಡು ಸ್ಥಳಗಳಿಗೆ ತೆಪ್ಪದ ಮೂಲಕ ತೆರಳಿ, ನಡುಭಾಗದಲ್ಲಿ ಸಿಲುಕಿ ಕೊಂಡಿರುವ ವಾಹನಗಳ ಚಾಲಕರು, ಸಾರ್ವಜನಿಕರನ್ನು ಭೇಟಿ ಮಾಡಿದರು.

ಗುಡ್ಡೆಹೊಸೂರಿನ ಈಡನ್ ಪಾರ್ಕ್‍ನ ಮನೆಯಲ್ಲಿ ಸಿಲುಕಿಕೊಂಡಿದ್ದ ವೃದ್ಧ ದಂಪತಿ ರಾಮಪ್ಪ ಮತ್ತು ಅವರ ಪತ್ನಿಯನ್ನು ಕ್ಷಿಪ್ರ ಪಡೆಯ ಸಹಕಾರದೊಂದಿಗೆ ಹೊರ ತಂದು ಸುರಕ್ಷಿತ ಸ್ಥಳಗಳಿಗೆ ರವಾನಿಸಿದರು.

ನಂತರ ಮಡಿಕೇರಿ ತಾಲೂಕಿನ ಮೂರ್ನಾಡು, ಹೊದ್ದೂರು ಭಾಗಕ್ಕೆ ತೆರಳಿ ಪರಿಸ್ಥಿತಿ ಅವಲೋಕಿಸಿದ ರಂಜನ್, ವಾಟೆಕಾಡಿನ ಸರ್ಕಾರಿ ಶಾಲೆಯಲ್ಲಿ ತೆರೆಯಲಾಗಿರುವ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ, ವ್ಯವಸ್ಥೆಗಳನ್ನು ಪರಿಶೀಲಿಸಿದರು. ಕೇಂದ್ರದಲ್ಲಿ 200ಕ್ಕೂ ಅಧಿಕ ಮಂದಿ ಆಶ್ರಯಪಡೆದಿದ್ದು, ಸೌಕರ್ಯಗಳಿಗೆ ಯಾವದೇ ಕೊರತೆಯಾಗದಂತೆ ಕ್ರಮವಹಿಸಲು ಸಿಬ್ಬಂದಿಗಳಿಗೆ ಸೂಚಿಸಿದರು.

ಹೊದವಾಡ ಕೇಂದ್ರದಲ್ಲಿ 88 ಮಂದಿ ಆಶ್ರಯಪಡೆದಿದ್ದು, ಹೊದವಾಡ, ಬಲಮುರಿ, ಬೊಳಿಬಾಣೆಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿರುವ ಮನೆಗಳನ್ನು ತೆರವುಗೊಳಿಸಿ, ಸುರಕ್ಷಿತ ಸ್ಥಳದಲ್ಲಿ ನಿವೇಶನ ಒದಗಿಸುವ ಬಗ್ಗೆ ಭರವಸೆ ನೀಡಿದರು. ಮೂರ್ನಾಡು ಸರಕಾರಿ ಶಾಲೆಯಲ್ಲಿ ಆಶ್ರಯ ಪಡೆದಿರುವ 187 ಮಂದಿ ಸಂತ್ರಸ್ತರನ್ನು ಭೇಟಿ ಮಾಡಿ ಕೇಂದ್ರದ ವ್ಯವಸ್ಥೆಗಳನ್ನು ಪರಿಶೀಲಿಸಿದರು.

-ವಿಜಯ್

.