*ಸಿದ್ದಾಪುರ, ಆ. 10: ಆಶ್ಲೇಷಾ ಮಳೆಯ ಮೇಘಾ ಸ್ಪೋಟದಿಂದ ಆಭ್ಯತ್‍ಮಂಗಲ, ಒಂಟಿಯಂಗಡಿ ವ್ಯಾಪ್ತಿಯ ಜನರ ಮನೆಗೆ ನೀರು ನುಗಿದ್ದು ತೋಟ ಗದ್ದೆ ಮನೆಗಳು ಜಲಾವೃತಗೊಂಡು ದ್ವೀಪದಂತಾಗಿದೆ.
ಆಭ್ಯತ್‍ಮಂಗಲ ಒಂಟಿಯಂಗಡಿಯಲ್ಲಿರುವ ಟಾಟಾ ಕಾಫಿ ಎಸ್ಟೇಟ್ ಹಾಗೂ ಗ್ರೀನ್‍ಫೀಲ್ಡ್ ಎಸ್ಟೇಟ್ ಕೆರೆ ಒಡೆದ ಪರಿಣಾಮ ಕೆ.ಎನ್. ಗಿರೀಶ, ಸತೀಶ ಹಾಗೂ ರೋಸಿ ಅವರ ಮನೆಗೆ ನೀರು ನುಗ್ಗಿ ಮನೆಯಲ್ಲಿದ್ದ ಸಾಮಗ್ರಿಗಳು ಕೊಚ್ಚಿ ಹೋಗಿವೆ. ಕೋಳಿಗಳು ನೀರು ಪಾಲಾಗಿವೆ. ಕುಮಾರಿ ಎಂಬವರ ಮನೆ ಮಳೆಗೆ ಸಂಪೂರ್ಣ ಕುಸಿದು ಬಿದ್ದು ಭಾರೀ ನಷ್ಟವಾಗಿದೆ.
ಆಭ್ಯತ್‍ಮಂಗಲ ಪೈಸಾರಿ ನಿವಾಸಿಗಳು ಎತ್ತರ ಪ್ರದೇಶದಲ್ಲಿ ವಾಸವಾಗಿದ್ದು ಕೆಳಭಾಗದಲ್ಲಿ ತೋಡು ಹರಿಯುತ್ತಿದೆ, ಮಳೆಯಿಂದ ತೋಡು ಒಡೆದು ನೀರು ಎಲೆಡೆ ವ್ಯಾಪಿಸಿದ್ದು ದ್ವೀಪದಂತಾಗಿದೆ.
ಇಲ್ಲಿನ ಯಾವ ಕಡೆ ತೆರಳಲು ಸಾಧ್ಯವಿಲ್ಲದಂತಾಗಿದೆ. ಮಡತ್ತಲೆ ರಮೇಶ ಎಂಬವರ ಮನೆ ಕಾಂಪೌಂಡ್‍ಗೆ ಪೈಸಾರಿ ಬಳಿಯ ಸೇತುವೆ ಮೇಲಿನ ನೀರು ನುಗ್ಗಿದೆ. ಶ್ರೀಮಂಗಲಕ್ಕೆ ತೆರಳುವ ರಸ್ತೆ ಬಂದ್ ಆಗಿದೆ ಊರುಹಂಬಂ ಪೈಸಾರಿ ಸೇತುವೆ ಮೇಲೆ ನೀರು ಮಳೆ ನೀರು ಹರಿದು ಮಡತ್ತಲೆ ರಾಮಚಂದ್ರ ಅವರ ಕಾಫಿ ಕರಿಮೆಣಸು ತೋಟ ಜಲಾವೃತಗೊಂಡಿದೆ. ಶ್ರೀಮಂಗಲಕ್ಕೆ ಹೋಗುವ ರಸ್ತೆ ಸೇತುವೆ ನೀರಿನಲ್ಲಿ ಮುಚ್ಚಿಹೋಗಿದ್ದು, ಕೆದಂಬಾಡಿ ಪ್ರಸನ್ನ ಅವರ ಮನೆ ಸುತ್ತಲೂ ದ್ವೀಪದಿಂದ ಕೂಡಿದೆ.
ಆಭ್ಯತ್‍ಮಂಗಲ ಅಂಚೆಮನೆ ಕುಟ್ಟಪ್ಪ ಅವರ ತೋಟದಲ್ಲಿ ಮಣ್ಣು ಕುಸಿದು ಬಿದ್ದು ತೋಟ ಹಾಗೂ ತೋಡಿಗೆ ನಷ್ಟವಾಗಿದೆ. ಅಂಚೆಮನೆ ಸುಧಿಕುಮಾರ್ ಅವರಿಗೆ ಸೇರಿದ ಕೆರೆ ಒಡೆದು ಕೆರೆಗೆ ಬಿಟ್ಟಿದ್ದ ಮೀನು ಮರಿಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಅವರ ಗದ್ದೆಗೆ ನೀರು ನುಗ್ಗಿದ್ದು, ಸಸಿ ಮಡಿ ನೀರು ಪಾಲಾಗಿದ್ದು, ಭತ್ತದ ಗದ್ದೆ ನಾಟಿ ಮಾಡಲು ಸಾಧ್ಯವಾಗದೆ ನಷ್ಟವಾಗಿದೆ. ಆಭ್ಯತ್‍ಮಂಗಲ ಅಂಚೆಮನೆ ಕುಟುಂಬಸ್ಥರ ನಾಟಿಗೆ ಸಿದ್ಧಪಡಿಸಿದ್ದ ಗದ್ದೆ ಸಂಪೂರ್ಣ ನೀರು ಪಾಲಾಗಿದ್ದರಿಂದ ಅತಂತ್ರಸ್ಥಿತಿಗೆ ತಲುಪಿದ್ದಾರೆ. ನೆಲ್ಲಿಹುದಿಕೇರಿಯಲ್ಲಿ 200ಕ್ಕೂ ಅಧಿಕ ಮನೆಗಳು ಕಾವೇರಿ ನೀರು ಪಾಲಾಗಿವೆ. - ಸುಧಿ