ಗೋಣಿಕೊಪ್ಪ ವರದಿ, ಆ. 10 : ಪ್ರವಾಹ ಇಳಿಮುಖಗೊಂಡಿದ್ದು, ಜನಜೀವನ ಮತ್ತೆ ಸಹಜ ಸ್ಥಿತಿಯತ್ತ ಬಂದಿದೆ. ಗೋಣಿಕೊಪ್ಪ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 206, ಪ್ರೌಢಶಾಲೆ ಕೇಂದ್ರದಲ್ಲಿ 66, ಒಟ್ಟು 272 ಸಂತ್ರಸ್ತರು ಇದ್ದಾರೆ. ಸ್ಥಳೀಯ ಗ್ರಾಮ ಪಂಚಾಯಿತಿ ವತಿಯಿಂದ ಆಹಾರ ಪದಾರ್ಥ ಪೂರೈಕೆಯಾಗುತ್ತಿದೆ.

ಮಾಯಮುಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾನಿಲ್ ಅಯ್ಯಪ್ಪ ದೇವರ ಕಾಡಿನಲ್ಲಿರುವ ಸರ್ಕಾರಿ ಶಾಲೆಯಲ್ಲಿ 15 ಜನರಿಗೆ ಆಶ್ರಯ ನೀಡಲಾಗಿದೆ. ಅಲ್ಲಿಗೆ ಆಹಾರ ಧಾನ್ಯಗಳ ಅವಶ್ಯಕತೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಪಂಕಜ ಮಾಹಿತಿ ನೀಡಿದ್ದಾರೆ. ಕಳತ್ಮಾಡ್ ಸರ್ಕಾರಿ ಪ್ರೌಢಶಾಲೆಯಲ್ಲಿ ಕಳತ್ಮಾಡ್, ಭೀಮನಕಲ್ಲು ಪೈಸಾರಿಯ 45 ನಿರಾಶ್ರಿತರಿಗೆ ಆಶ್ರಯ ನೀಡಲಾಗಿದೆ. ಗೋಣಿಕೊಪ್ಪ ಕಾವೇರಿ ಕಾಲೇಜು ಎನ್‍ಎಸ್‍ಎಸ್ ಸೇವಕರು ಪರಿಹಾರ ಕೇಂದ್ರದಲ್ಲಿ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ.

ದೇವನೂರು ಕಿರು ಆಣೆಕಟ್ಟು ಒಡೆದು ಹೋಗಿರುವದರಿಂದ ಪ್ರವಾಹ ಎದುರಾಗಿದೆ ಸುತ್ತಲಿನ ಸಾವಿರಾರು ಎಕರೆ ತೋಟ, ಗದ್ದೆ ಜಲಾವೃತಗೊಂಡಿದೆ.

ಗೋಣಿಕೊಪ್ಪ ಪಟ್ಟಣಕ್ಕೆ ಶನಿವಾರ ವಿದ್ಯುತ್ ಸೇವೆ ನೀಡಲಾಯಿತು. ಇದರಿಂದ 4 ದಿನಗಳ ನಂತರ ವಿದ್ಯುತ್ ಬೆಳಕು ಕಾಣುವಂತಾಯಿತು. ಕಿರುಗೂರು ಮೂಲಕ ಹರಿಯುವ ಕೀರೆಹೊಳೆ ಪ್ರವಾಹ ತಗ್ಗದ ಕಾರಣ ನಲ್ಲೂರು, ಬೆಸಗೂರು ಗ್ರಾಮಕ್ಕೆ ತೆರಳುವ ಜನರ ಸಂಕಷ್ಟ ಹಾಗೇ ಮುಂದುವರಿದಿದೆ.

-ಸುದ್ದಿಪುತ್ರ