ಸೋಮವಾರಪೇಟೆ,ಆ.10: ಭಾರೀ ಮಳೆಯ ಹಿನ್ನೆಲೆ ಕಾವೇರಿ ನದಿಪಾತ್ರದಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ರಾಜ್ಯ ಹೆದ್ದಾರಿ ಮುಳುಗಡೆಯಾಗಿರುವ ಹಿನ್ನೆಲೆ ಕೆಲ ವಾಹನಗಳು ನಡುಭಾಗದಲ್ಲಿ ಸಿಲುಕಿವೆ.

ಕುಶಾಲನಗರದ ತಾವರೆಕೆರೆ ಹಾಗೂ ಮಾದಾಪಟ್ಟಣದಲ್ಲಿ ಕಾವೇರಿ ನದಿ ಉಕ್ಕಿ ಹರಿಯುತ್ತಿರುವದರಿಂದ ಗಂಧದಕೋಟೆ ದ್ವೀಪದಂತಾಗಿದ್ದು, ನಾಲ್ಕೈದು ಬಸ್‍ಗಳು ಇಲ್ಲಿ ನಿಲುಗಡೆಯಾಗಿವೆ.

ಬೆಂಗಳೂರಿನಿಂದ ಕಣ್ಣೂರಿಗೆ ತೆರಳುತ್ತಿದ್ದ 3 ರಾಜಹಂಸ ಬಸ್‍ಗಳು, ಬೆಂಗಳೂರಿನಿಂದ ಕಾಸರಗೋಡಿಗೆ ತೆರಳುತ್ತಿದ್ದ 2 ಮತ್ತು ಕಾಞಂಗಾಡಿಗೆ ತೆರಳಬೇಕಿದ್ದ 1 ರಾಜಹಂಸ ಬಸ್ ಗಂಧದಕೋಟೆಯಲ್ಲಿ ನಿಲುಗಡೆಯಾಗಿದ್ದು, ದ್ವೀಪದಂತಾಗಿರುವ ಪ್ರದೇಶದಲ್ಲಿ ಬಸ್ ಚಾಲಕರು, ನಿರ್ವಾಹಕರು ದಿನದೂಡುತ್ತಿದ್ದಾರೆ.

ಇದರೊಂದಿಗೆ 3 ಪ್ರವಾಸಿ ಬಸ್‍ಗಳು ಇದೇ ಸ್ಥಳದಲ್ಲಿ ನಿಲುಗಡೆಯಾಗಿವೆ.ಪ್ರಯಾಣಿಕರು ಮತ್ತು ಪ್ರವಾಸಿಗರನ್ನು ಸ್ಥಳದಿಂದ ಕರೆದೊಯ್ಯಲಾಗಿದ್ದು, ಚಾಲಕರು ಮತ್ತು ನಿರ್ವಾಹಕರು ಬಸ್‍ಗೆ ಕಾಯುತ್ತಿದ್ದಾರೆ. ಇವರುಗಳಿಗೆ ಕುಡಿಯುವ ನೀರು, ಊಟ ಹಾಗೂ ಬಟ್ಟೆಗೆ ಸಮಸ್ಯೆಯಾಗಿದ್ದು, ದ್ವೀಪದಂತಾಗಿರುವ ಗಂಧದಕೋಟೆಯಲ್ಲಿ ನೀರಿನ ಇಳಿಕೆಯನ್ನು ಎದುರು ನೋಡುತ್ತಿದ್ದಾರೆ.