ಕರಿಕೆ, ಆ. 10: ವರುಣನ ಅಬ್ಬರದಿಂದಾಗಿ ತತ್ತರಿಸಿರುವ ಕೊಡಗಿನ ಗಡಿಗ್ರಾಮ ಕರಿಕೆಯಲ್ಲಿ ಮಳೆ ಗಾಳಿಯಿಂದಾಗಿ ವಿದ್ಯುತ್ ಕಂಬಗಳು ನೆಲಕ್ಕುರುಳಿ ಒಂದು ವಾರದಿಂದ ಕೇರಳದಿಂದ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದ್ದು, ಗ್ರಾಮದಲ್ಲಿ ಕೂಡ ವಿದ್ಯುತ್ ಕಂಬ ಉರುಳಿ ಬಿದ್ದಿದ್ದು ಸಿಬ್ಬಂದಿಗಳು ಹಗಲಿರುಳು ಕಾರ್ಯ ನಿರತ ವಾಗಿದ್ದು ಕೇರಳದಲ್ಲಿ ವಿಪರೀತ ಗಾಳಿ ಮಳೆಯಿಂದಾಗಿ ವಿದ್ಯುತ್ ಸಂಪರ್ಕ ಕಡತಗೊಂಡ ಹಿನ್ನೆಲೆಯಲ್ಲಿ ಇನ್ನೂ ಎರಡು ಮೂರು ದಿನ ವಿದ್ಯುತ್ ಪೂರೈಕೆ ಅಸಾಧ್ಯ ಎಂಬ ಮಾಹಿತಿ ಲಭ್ಯವಾಗಿದೆ. ಅಲ್ಲದೇ ಕರಿಕೆ- ಭಾಗಮಂಡಲ ಅಂತರರಾಜ್ಯ ಹೆದ್ದಾರಿಯಲ್ಲಿ ಮೂರು ನಾಲ್ಕು ಕಡೆ ಮರಗಳು ಉರುಳಿ ಬಿದ್ದ ಪರಿಣಾಮ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಅರಣ್ಯ ಇಲಾಖೆ, ಗ್ರಾಮಸ್ಥರು ಮರಗಳನ್ನು ತೆರವು ಗೊಳಿಸಿ ರಸ್ತೆ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು. ಕಾಸರಗೋಡು ಜಿಲ್ಲೆಯಲ್ಲಿ ಗಂಟೆಗೆ ನೂರ ಇಪ್ಪತ್ತು ಕಿ.ಮಿ. ವೇಗದಲ್ಲಿ ಗಾಳಿ ಬೀಸುತ್ತಿದ್ದು, ಇದರ ಪರಿಣಾಮವಾಗಿ ಕೇರಳ ಗಡಿ ಗ್ರಾಮವಾದ ಕರಿಕೆಯಲ್ಲಿ ಕೂಡ ವೇಗವಾದ ಗಾಳಿ ಬೀಸುತ್ತಿದ್ದು ಧಾರಾಕಾರ ಮಳೆ ಸುರಿಯುತ್ತಿದ್ದು ನದಿ ತೊರೆಗಳು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ.
- ಸುಧೀರ್ ಹೊದ್ದೆಟ್ಟಿ