ವೀರಾಜಪೇಟೆ, ಆ. 9: ಮಹನೀಯರ ಜಯಂತಿಗಳು ಕೇವಲ ಬೆರಳೆಣಿಕೆಯ ಜನರಿಗೆ ಮಾತ್ರ ಸೀಮಿತವಾಗಿರದೆ ಎಲ್ಲಾ ವರ್ಗದ ಜನರು ಆಚರಿಸುವಂತಾಗಬೇಕು ಎಂದು ವೀರಾಜಪೇಟೆ ತಹಶೀಲ್ದಾರ್ ಕೆ. ಪುರಂದರ್ ಹೇಳಿದರು.

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲೂಕು ಆಡಳಿತ ವತಿಯಿಂದ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಶಿವಶರಣ ಹಡಪದ ಅಪ್ಪಣ್ಣ ಅವರ ಜಯಂತ್ಯೋತ್ಸವದಲ್ಲಿ ಮಾತನಾಡಿದ ಅವರು, ಎಲ್ಲಾ ಶರಣರ ಸಂದೇಶಗಳಲ್ಲಿ ಮೂಲತತ್ವ ಸಮಾಜ ಹಾಗೂ ಮಾನವನ ಒಳಿತಾಗುವದು ಮೂಲ ಸಾರವಾಗಿದೆ ಎಂದು ಹೇಳಿದರು.

ತಾಲೂಕು ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಷಣ್ಮುಗ ಮಾತನಾಡಿ, ಹಡಪದ ಅಪ್ಪಣ್ಣ ಅವರು 12ನೇ ಶತಮಾನದಲ್ಲಿ ಬಸವಣ್ಣ ಅವರ ಅನುಯಾಯಿ ಆಗಿದ್ದರು. ಅವರ ಜೀವನ ಶೈಲಿಯನ್ನು ನಮ್ಮ ಜೀವನದಲ್ಲೂ ಅಳವಡಿಸಿಕೊಳ್ಳಬೇಕು. ಅವರ ಜೀವನ ಚರಿತ್ರೆಯ ಬಗ್ಗೆ ಹೆಚ್ಚಿನ ಅಧ್ಯಯನ ಆಗಬೇಕು ಎಂದು ಹೇಳಿದರು.

ವೇದಿಕೆಯಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀಧರ್, ಸಹಾಯಕ ಕೃಷಿ ಅಧಿಕಾರಿ ಶಿವಮೂರ್ತಿ, ಉಪ ತಹಶೀಲ್ದಾರ್ ಪೊನ್ನು, ಮಡಿಕೇರಿ ಸರಸ್ವತಿ ಡಿಎಡ್ ಕಾಲೇಜಿನ ಉಪನ್ಯಾಸಕ ಕುಮಾರ್, ತಾಲೂಕು ಸವಿತಾ ಸಮಾಜದ ಅಧ್ಯಕ್ಷ ಕೆ.ಟಿ. ವೆಂಕಟೇಶ್ ಉಪಸ್ಥಿತರಿದ್ದರು.