ಮಡಿಕೇರಿ, ಆ. 9: ಈಶಾ ಫೌಂಡೇಷನ್ ಸಂಸ್ಥಾಪಕ ಸದ್ಗುರು ಅವರು ಆರಂಭಿಸಿರುವ ‘ಕಾವೇರಿ ಕೂಗು’ ಅಭಿಯಾನಕ್ಕೆ ತಮ್ಮ ಬೆಂಬಲ ಸೂಚಿಸಿದ ಮೈಸೂರು ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮೈಸೂರು ಅರಮನೆಯ ಬಲರಾಮ ದ್ವಾರದಿಂದ ‘ಕಾವೇರಿ ಕೂಗು’ ಜಾಗೃತಿ ರ್ಯಾಲಿಗೆ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು. ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಮಹಾರಾಜ ಯದುವೀರ್, ತಾಯಿ ಕಾವೇರಿ ನಮ್ಮನ್ನು ತಲೆತಲಾಂತರಗಳಿಂದ ಪೊರೆಯುತ್ತಿದ್ದಾಳೆ ಮತ್ತು ತಮ್ಮ ವಂಶಜರು ಬಾಳಿಬದುಕಿದ್ದೇ ತಾಯಿ ಕಾವೇರಿಯ ಕೃಪೆಯಿಂದ ಎಂದು ಭಕ್ತಿಪೂರ್ವಕವಾಗಿ ನುಡಿದರು.
ರೈತರಿಗೆ ಮಾಹಿತಿ ಒದಗಿಸಿ ‘ಕಾವೇರಿ ಕೂಗು’ ಕುರಿತು ಅರಿವು ಮೂಡಿಸುವ ಉದ್ದೇಶದ ವಾಹನಗಳ ಸರಣಿಯನ್ನು ಮೈಸೂರು ಅರಮನೆಯ ಬಲರಾಮ ದ್ವಾರದ ಬಳಿ ಮೈಸೂರಿನ ನಿವಾಸಿಗಳು ಉತ್ಸಾಹಭರಿತರಾಗಿ ಪಾಲ್ಗೊಂಡು ವಾಹನ ಸರಣಿಯ ಜೊತೆ ಮಾಹಿತಿ ಕೊಡಲು ಪ್ರಯಾಣಿಸುತ್ತಿರುವ ಸ್ವಯಂಸೇವಕರು ಗಳನ್ನು ಹುರಿದುಂಬಿಸಿ ಬೀಳ್ಕೊಟ್ಟರು. ಈ ವಾಹನ ಸರಣಿ ಅಭಿಯಾನ ಮೈಸೂರಿನಿಂದ ಶುರುವಾಗಿ ಮುಂದಿನ ದಿನಗಳಲ್ಲಿ ಕಾವೇರಿ ಕೊಳ್ಳದಲ್ಲಿರುವ 940 ಗ್ರಾಮಗಳನ್ನು ತಲುಪಲಿದೆ. ‘ಕಾವೇರಿ ಕೂಗು’ ಅಭಿಯಾನವು ರೈತರು ತಮ್ಮ ಜಮೀನಿನ ಒಂದು ಭಾಗದಲ್ಲಿ ಕೃಷಿ ಅರಣ್ಯ ಮಾದರಿಯನ್ನು ಅಳವಡಿಸಿಕೊಳ್ಳುವ ಮೂಲಕ ತಮ್ಮ ಸಂಪತ್ತನ್ನು ಹೆಚ್ಚಿಸಿಕೊಳ್ಳುವದೇ ಅಲ್ಲದೆ, ಅಂತರ್ಜಲವನ್ನು ಮರುಪೂರಣ ಮಾಡಿ, ನೀರಿನ ಒರತೆ ಚಿಮ್ಮುವಂತೆ ಮಾಡಿ ತಾಯಿ ಕಾವೇರಿ ತನ್ನ ಹಿಂದಿನ ವೈಭವ ಮೈತಾಳುವಂತೆ ಮಾಡಲು ಸಹಾಯಕವಾಗಲಿದೆ.
ಮಾಜಿ ಸಚಿವ ಎಸ್.ಎ. ರಾಮದಾಸ್ ಅವರು ಮಾಧ್ಯಮವನ್ನುದ್ದೇಶಿಸಿ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಜೊತೆಗೂಡಿ ಈ ಅಭಿಯಾನವನ್ನು ಮುಂದುವರೆಸುವದು ಪ್ರಜಾಪ್ರತಿನಿಧಿ ಗಳಾದ ನಮ್ಮಗಳ ಕರ್ತವ್ಯ ಎಂದರು. ಕೃಷಿಕ ಜೀವನದಲ್ಲಿ ತೊಡಗಿರುವ ಯುವಕರಿಗೆ ಕರೆ ನೀಡಿ, ‘ಕಾವೇರಿ ಕೂಗು’ ಅಭಿಯಾನದ ಮೂಲ ತಿರುಳಾದ ಕೃಷಿ ಅರಣ್ಯ ಬೆಳೆಸುವ ಮೂಲಕ ಜಮೀನಿನಲ್ಲಿ ಲಾಭದಾಯಕ ಕೃಷಿ ಮಾಡುವಂತೆ ಒತ್ತಾಯಿಸಿದರು. ಬೆಂಗಳೂರಿನ ಕೃಷಿ ವಿಶ್ವ ವಿದ್ಯಾಲಯದ ನಿವೃತ್ತ ಸಂಶೋಧನಾ ನಿರ್ದೇಶಕರೂ ಮತ್ತು ಒಣಬೇಸಾಯ ವಿಭಾಗದ ಮುಖ್ಯಸ್ಥರೂ ಆಗಿದ್ದ ಡಾ. ಎಂ.ಎ. ಶಂಕರ್ ಅವರು, ಈ ವಾಹನ ಸರಣಿಯ ಜೊತೆ ಮಾಹಿತಿ ಪ್ರಸರಣಕ್ಕಾಗಿ ಪ್ರಯಾಣಿಸುತ್ತಿರುವ ‘ನದಿ ವೀರ’ ಸ್ವಯಂ ಸೇವಕರುಗಳಿಗೆ ಒಣ ಬೇಸಾಯ ಕುರಿತಂತೆ ಹೆಚ್ಚಿನ ಮಾಹಿತಿ ಮತ್ತು ತಿಳುವಳಿಕೆ ನೀಡಿ, ಕೃಷಿ ಅರಣ್ಯ ಬೆಳೆಸುವದರಿಂದ ಹೇಗೆ ನೀರು ಭೂಮಿಯಲ್ಲಿ ಇಂಗಿ ನದಿಗಳ ಪುನಃಶ್ಚೇತನಕ್ಕೆ ಕಾರಣವಾಗುತ್ತದೆ ಎಂದು ವಿವರಿಸಿದರು.