ವೀರಾಜಪೇಟೆ, ಆ. 9: ಆಶ್ಲೇಷ ಮಳೆಯ ರೌದ್ರಾವತಾರ ಹೆಚ್ಚಾಗಿದ್ದು, ಕಳೆದ 24 ಗಂಟೆಗಳಲ್ಲಿ ವೀರಾಜಪೇಟೆ ವಿಭಾಗಕ್ಕೆ 11.15 ಇಂಚು ಮಳೆಯಾಗಿದ್ದು, ಈ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದಿದೆ. ಅಲ್ಲಲ್ಲಿ ರಸ್ತೆ ಸಂಪರ್ಕ ಕಡಿತಗೊಂಡು ಕುಡಿಯುವ ನೀರು, ವಿದ್ಯುತ್ ಇಲ್ಲದೆ ವೀರಾಜಪೇಟೆ ವಿಭಾಗದ ಜನ ಜೀವನ ಅಸ್ತವ್ಯಸ್ತಗೊಂಡಿದೆ.

ಅರಸುನಗರ, ಮಲೆತಿರಿಕೆಬೆಟ್ಟ, ಅಯ್ಯಪ್ಪಬೆಟ್ಟ, ಸುಂಕದ ಕಟ್ಟೆ, ಹಾಗೂ ನೆಹರೂ ನಗರಗಳಲ್ಲಿ ಬರೆ ಕುಸಿತಗೊಂಡು ಮನೆ ಜಖಂ ರಸ್ತೆ ಸಂಪರ್ಕ ಕಡಿತ ಮುಂದುವರೆದಿದೆ.

ಇಂದು ಬೆಳಿಗ್ಗೆ ವೀರಾಜಪೇಟೆ ಪಟ್ಟಣದ ಪಂಜರ್‍ಪೇಟೆಯ ತಗ್ಗು ಪ್ರದೇಶವಾದÀ ಸೆಲ್ವಾನಗರ, ವಿಜಯನಗರದ ಮನೆಗಳಿಗೆ ನೀರು ನುಗ್ಗಿದ್ದು ಮನೆಯಲ್ಲಿನ ಸಾಮನು ಸರಂಜಾಮುಗಳು ನೀರಿನಲ್ಲಿ ಮುಳುಗಿದೆ. ಪಟ್ಟಣ ಪಂಚಾಯಿತಿ ಅಧಿಕಾರಿಗಳು ಸಿಬ್ಬಂದಿ ಆಜು ಬಾಜಿನ ನಿವಾಸಿಗಳ ಸಹಕಾರದಿಂದ ನೀರನ್ನು ಹೊರ ತೆಗೆದರೂ ಭಾರೀ ಮಳೆಯ ಪರಿಣಾಮವಾಗಿ ಮಳೆಯ ನೀರು ಮತ್ತೆ ಮನೆಯೊಳಗೆ ನುಗ್ಗುತ್ತಿದೆ.

ವೀರಾಜಪೇಟೆ ಪಟ್ಟಣದ ಮಾಂಸ ಮಾರುಕಟ್ಟೆ ಬಳಿ ಬಿದ್ದ ಭಾರೀ ಮಳೆ ನೀರು ಹೊರ ಹೋಗವ ರಾಜಾ ಕಾಲುವೆ ಒತ್ತುವರಿಯಾಗಿರುವ ಆರೋಪ ಇದೆ. ಸುಭಾಷ್‍ನಗರ, ವಿಜಯನಗರ, ಸೆಲ್ವನಗರ, ನೆಹರುನಗರ, ಕಾವೇರಿ ಕಲ್ಯಾಣ ಮಂಟಪ ಬಳಿಯಿಂದ ಬರುವ ನೀರು ಇದೇ ರಾಜಾ ಕಾಲುವೆಯಲ್ಲಿ ಹರಿಯಬೇಕು. ಹಿಂದೆ 15 ಅಡಿಗಳಷ್ಟಿದ್ದ ಕಾಲುವೆ ಒತ್ತುವರಿಯಾಗಿ ಕೇವಲ 5 ಅಡಿಗಳಷ್ಟಿದೆ. ಇದರಿಂದ ನೀರು ಸರಾಗವಾಗಿ ಹರಿಯದೆ ಮನೆಗಳಿಗೆ ನುಗ್ಗುತ್ತಿದೆ ಎಂದು ಸ್ಥಳೀಯ ನಿವಾಸಿ ಇರ್ಷಾದ್ ತಮ್ಮ ಅಳಲನ್ನು ತೋಡಿಕೊಂಡರು

ಪಟ್ಟಣದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮುಖ್ಯ ರಸ್ತೆಯಲ್ಲಿ ಬೆಳಿಗ್ಗೆ 6 ಗಂಟೆ ಸಮಯದಲ್ಲಿ ಕಟ್ಟಡ ಕುಸಿದಿದ್ದು, ಯಾವದೇ ಅನಾಹುತ ಸಂಭವಿಸಿಲ್ಲ. ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ಕಾಂಪೌಂಡ್, ಪಂಜರುಪೇಟೆಯ ಜಯರಾಮ್ ಅವರ ವರ್ಕ್‍ಶಾಪ್ ಕಟ್ಟಡ, ಸುಂಕದಕಟ್ಟೆ ಬಳಿ ಬರೆ ಜರೆದಿದೆ. ಪೆರುಂಬಾಡಿಯಿಂದ ಹೆಗ್ಗಳಕ್ಕೆ ತೆರಳುವ ಮುಖ್ಯ ರಸ್ತೆಯಲ್ಲಿ ಬರೆ ಕುಸಿದು ವಾಹನ ಸಂಚಾರ ಕಡಿತಗೊಂಡಿದೆ. ಆರ್ಜಿ ಬಳಿ ರಸ್ತೆಯ ಮೇಲೆ 3 ಅಡಿ ನೀರು ಹರಿಯತ್ತಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ.

ರಾಜ್ಯ ಹೆದ್ದಾರಿ ಬಂದ್: ವೀರಾಜಪೇಟೆ-ಮಡಿಕೇರಿ ರಾಜ್ಯ ಹೆದ್ದಾರಿ ಕಳೆದ 2 ದಿನದಿಂದ ಸಂಪೂರ್ಣ ಬಂದ್ ಆಗಿದೆ. ಕದನೂರು ಸೇತುವೆಯ ಮೇಲೆ ಮೂರು ಅಡಿ ನೀರು ಇದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ. ಕದನೂರಿನಿಂದ ಕಡಂಗ, ಬೆಳ್ಳುಮಾಡು, ನಾಪೋಕ್ಲು ಕಡೆಗೆ ತೆರಳಲು ಸಾಧ್ಯವಾಗುತ್ತಿಲ್ಲ.

ಕೊಡಗಿನ ಇತಿಹಾಸದಲ್ಲಿಯೇ ದಕ್ಷಿಣ ಕೊಡಗಿನಲ್ಲಿ ಇಂದು ಜಲಪ್ರಳಯವಾಗಿದೆ. ವೀರಾಜಪೇಟೆ-ಮಡಿಕೇರಿ ರಸ್ತೆ ಬೇತ್ರಿ ಸೇತುವೆಯ ಮೇಲೆ 8 ಅಡಿಗೂ ಅಧಿಕ ನೀರು ಹರಿಯುತ್ತಿದ್ದು, ದಾಖಲೆಯನ್ನು ಸೃಷ್ಟಿಸಿದೆ. ಇದರಿಂದ ಬೇತರಿ ಗ್ರಾಮದ ಸುತ್ತ ಮುತ್ತಲಿರುವ ಗ್ರಾಮಗಳು ಜಲಾವೃತವಾಗಿದೆ. ಬೇತ್ರಿಯಲ್ಲಿ 66 ಮನೆಗಳು ಸಂಪೂರ್ಣವಾಗಿ ಮುಳುಗಿದ್ದು, ಕೇವಲ ಮನೆಯ ಹಂಚುಗಳು ಮಾತ್ರ ಕಾಣುತ್ತಿದೆ. ಹೆಮ್ಮಾಡು ಗ್ರಾಮದ ಪಳೆಯಂಡ ರಾಜ, ಅರೆಯಂಡ ತಿಮ್ಮಯ್ಯ, ತಮ್ಮಯ್ಯ ಅವರ ಮನೆಗಳು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಡೆಗೊಂಡಿದ್ದು, ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದ್ದು, ಗ್ರಾಮಸ್ಥರು ದಾರಿ ಇಲ್ಲದೆ ಪರದಾಡುತ್ತಿದ್ದಾರೆ. ಬೇತ್ರಿಯಲ್ಲಿ ಪ್ರವಾಹದಲ್ಲಿ ಸಿಕ್ಕಿ ಹಾಕಿಕೊಂಡಿದ್ದ 26 ಜನರನ್ನು ಇಂದು ಬೆಳಿಗ್ಗೆ ಎನ್‍ಡಿಆರ್‍ಎಫ್ ತಂಡ ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಸಾಗಿಸಿದರು. ಬೇತರಿ ಬಳಿಯ ಗ್ರಾಮಾಂತರ ಪ್ರದೇಶಗಳಲ್ಲಿ ಸಣ್ಣ ಪುಟ್ಟ ಬರೆಗಳು ಕುಸಿಯುತ್ತಿದ್ದು ಬಹುತೇಕ ರಸ್ತೆಗಳು ಬಂದ್ ಆಗಿದೆ.

ವೀರಾಜಪೇಟೆ ಪಟ್ಟಣ ಪಂಚಾಯಿತಿಗೆ ಸೇರಿದ ವೀರಾಜಪೇಟೆಗೆ ನಲ್ಲಿ ನೀರು ಪೊರೈಸುವ ಮೂಲ ಸ್ಥಾವರ ಮುಳುಗಡೆಯಾಗಿದ್ದು, ನೀರು ಪೊರೈಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

- ಡಿ.ಎಂ. ರಾಜ್‍ಕುಮಾರ್