ಸೋಮವಾರಪೇಟೆ, ಆ.9: ಜಿಲ್ಲೆಯ ಗ್ರಾಮೀಣ ಪ್ರತಿಭೆ, ಭಾರತ ತಂಡದ ಕಬಡ್ಡಿ ಆಟಗಾರ ಸಚಿನ್ ಪೂವಯ್ಯ ಅವರನ್ನು ಇಲ್ಲಿನ ಡಾಲ್ಫೀನ್ ಸ್ಪೋಟ್ರ್ಸ್ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು. ಪ್ರತಿಕಾಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕ್ಲಬ್‍ನ ಅಧ್ಯಕ್ಷ ಹೆಚ್.ಎನ್. ಅಶೋಕ್, ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ಎಸ್. ಮಹೇಶ್, ಕರವೇ ತಾಲೂಕು ಅಧ್ಯಕ್ಷ ದೀಪಕ್, ಶ್ರೀ ಗೌರಿ ಗಣೇಶ ಸೇವಾ ಸಮಿತಿ ಅಧ್ಯಕ್ಷ ಸುಬ್ರಮಣಿ ಸೇರಿದಂತೆ ಇತರರು, ಸಚಿನ್ ಅವರನ್ನು ಸನ್ಮಾನಿಸಿದರು.

ಸಚಿನ್ ಸಾಧನೆ: ಕಳೆದ ಆರು ವರ್ಷಗಳಿಂದ ಗ್ರಾಮೀಣ ಕ್ರೀಡೆ ಕಬಡ್ಡಿಯಲ್ಲಿ ಮಿಂಚುತ್ತಿರುವ 22 ವರ್ಷ ಪ್ರಾಯದ ಸಚಿನ್, ಇದುವರೆಗೆ ಹತ್ತಾರು ಟೂರ್ನಿಗಳಲ್ಲಿ ಆಟವಾಡಿದ್ದಾರೆ. ಜು. 22 ರಿಂದ 27 ರವರೆಗೆ ಮಲೇಷಿಯಾದಲ್ಲಿ ನಡೆದ ಅಂತರರಾಷ್ಟ್ರೀಯ ಕಬಡ್ಡಿಯಲ್ಲಿ ವಿಶ್ವಕಪ್ ಪಡೆದ ಭಾರತ ತಂಡದ ಆಟಗಾರರಾಗಿದ್ದ ಸಚಿನ್ ಇರಾಕ್‍ನೊಂದಿಗೆ ನಡೆದ ಫೈನಲ್‍ನಲ್ಲಿ ಗೆಲವಿನೊಂದಿಗೆ ಬೆಸ್ಟ್ ಡಿಫೆಂಡರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕೊಡಗು ನ್ಯೂ ಕಬಡ್ಡಿ ಫೆಡರೇಷನ್ ಮೂಲಕ, ಜಿಲ್ಲೆಯ ತಂಡದ ಪರವಾಗಿ ಆಟವಾಡಿದ ಅವರು, 2018 ರಲ್ಲಿ ದೊಡ್ಡಬಳ್ಳಾಪುರದಲ್ಲಿ ನಡೆದ ರಾಜ್ಯಮಟ್ಟದ ಹಿರಿಯರ ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು. ಬೆಳಗಾಂನಲ್ಲಿ ನಡೆದ ರಾಷ್ಟ್ರೀಯ ಹಿರಿಯರ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು. 2019 ರಲ್ಲಿ ನಡೆದ ಇಂಡೋ ಇಂಟರ್ ನ್ಯಾಷನಲ್ ಪ್ರೀಮಿಯರ್ ಕಬಡ್ಡಿ ಲೀಗ್‍ನಲ್ಲಿ ಪುಣೆ ಪ್ರೈಡ್ ತಂಡವನ್ನು ಪ್ರತಿನಿಧಿಸಿ, ರಾಷ್ಟ್ರಮಟ್ಟದ ಆಯ್ಕೆಗಾರರ ಗಮನ ಸೆಳೆದು ಭಾರತ ತಂಡಕ್ಕೆ ಆಯ್ಕೆಯಾಗಿ, ವಿಶ್ಕ ಕಪ್ ಪಡೆಯುವಲ್ಲಿ ತಮ್ಮ ಕೊಡುಗೆ ನೀಡಿದ್ದಾರೆ. ಸೋಮವಾರಪೇಟೆ ತಾಲೂಕಿನ ಉಂಜಿಗನಹಳ್ಳಿ ಗ್ರಾಮದ ಕೃಷಿಕ ಪೂವಯ್ಯ, ಸರಸು ದಂಪತಿಗಳ ಪುತ್ರರಾಗಿರುವ ಸಚಿನ್, ಪಟ್ಟಣದ ಜ್ಞಾನವಿಕಾಸ, ಸಂತ ಜೋಸೆಫರ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ, ಉಜಿರೆಯ ಎಸ್.ಡಿ.ಎಂ. ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ಕುಶಾಲನಗರ ಸತ್ಯ ಸ್ಪೋಟ್ರ್ಸ್ ಕ್ಲಬ್‍ನ ಕೋಚ್ ಸತ್ಯ ಅವರ ಗರಡಿಯಲ್ಲಿ ಪಳಗಿದ ಸಚಿನ್, ತನ್ನ ಯಶಸ್ಸಿನ ಹಿಂದೆ ಅರ್ಜುನ ಪ್ರಶಸ್ತಿ ವಿಜೇತ ಹೊನ್ನಪ್ಪ ಅವರ ಮಾರ್ಗದರ್ಶನವಿದೆ ಎಂದು ಸ್ಮರಿಸಿದ್ದಾರೆ.