ಸೋಮವಾರಪೇಟೆ, ಆ. 9: ಭಾರೀ ಮಳೆ ಹಿನ್ನೆಲೆ ಕುಶಾಲನಗರದ ತಾವರೆಕೆರೆಯಲ್ಲಿ ಪ್ರವಾಹ ಉಂಟಾಗಿ ಕುಶಾಲನಗರ-ಸುಂಟಿಕೊಪ್ಪ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ತಡೆಯಾಗಿದ್ದು, ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಸೇರಿದಂತೆ ಇತರ ಜನಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕುಶಾಲನಗರ-ಸುಂಟಿಕೊಪ್ಪ-ಮಡಿಕೇರಿ ರಸ್ತೆಯ ತಾವರೆಕೆರೆಯಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರೆದಿದ್ದು, ನೀರು ಇಳಿಕೆಯಾಗದ ಹಿನ್ನೆಲೆ ವಾಹನ ಸಂಚಾರಕ್ಕೆ ಸಂಪೂರ್ಣ ತಡೆಬಿದ್ದಿದೆ.ಪರಿಣಾಮ ಸುಂಟಿಕೊಪ್ಪ-ಮಡಿಕೇರಿಗೆ ತೆರಳುವ ವಾಹನಗಳು ಕುಶಾಲನಗರದ ಸುಂದರನಗರ ಮಾರ್ಗವಾಗಿ ಹಾರಂಗಿ, ಗುಡ್ಡೆ ಹೊಸೂರು ಮೂಲಕ ತೆರಳಬೇಕಿದೆ ಎಂದು ಸ್ಥಳದಲ್ಲಿದ್ದ ಶಾಸಕ ಅಪ್ಪಚ್ಚು ರಂಜನ್ ಅವರು ಡಿವಿಎಸ್ ಅವರಿಗೆ ಮಾಹಿತಿ ಒದಗಿಸಿದರು.
ನಂತರ ಕಾವೇರಿ ನದಿಯ ಪ್ರವಾಹಕ್ಕೆ ಸಿಲುಕಿ ಮುಳುಗಡೆ ಯಾಗಿರುವ ಸಾಯಿ ಬಡಾವಣೆ, ರಸೂಲ್ ಬಡಾವಣೆಗಳಿಗೆ ಭೇಟಿ ನೀಡಿ ಸ್ಥಳೀಯರೊಂದಿಗೆ ಮಾತುಕತೆ ನಡೆಸಿದರು.ಮನೆಗಳೊಳಗೆ ಸಂಪೂರ್ಣ ನೀರು ತುಂಬಿದ್ದು, ಪ್ರವಾಹ ಪರಿಸ್ಥಿತಿ ಇಳಿಕೆಯಾದೊಡನೆ ಮನೆಗಳ ಶುಚಿತ್ವಕ್ಕೆ ಕ್ರಮ ವಹಿಸಲಾಗುವದು. ಪರಿಹಾರ ಕೇಂದ್ರಕ್ಕೆ (ಮೊದಲ ಪುಟದಿಂದ) ಆಗಮಿಸಲು ಕಷ್ಟವಾದರೆ ಸದ್ಯಕ್ಕೆ ಸುರಕ್ಷಿತ ಸ್ಥಳಗಳಲ್ಲಿರುವ ಸಂಬಂಧಿಕರ ಮನೆಗಳಿಗೆ ತೆರಳುವಂತೆ ಸಲಹೆ ನೀಡಿದರು.
ಸಂಬಂಧಿಕರ ಮನೆಗಳಲ್ಲಿದ್ದರೆ ತಾಲೂಕು ಕಚೇರಿಗೆ ಮಾಹಿತಿ ಒದಗಿಸಿ ಹೆಸರು ನೋಂದಾಯಿಸಿಕೊಳ್ಳಬೇಕು. ಅಲ್ಲಿಗೆ ಸೌಲಭ್ಯಗಳನ್ನು ಒದಗಿಸಲಾಗುವದು ಎಂದು ಶಾಸಕ ಅಪ್ಪಚ್ಚು ರಂಜನ್ ತಿಳಿಸಿದರು.
ಈ ಸಂದರ್ಭ ಶಾಸಕರುಗಳಾದ ಕೆ.ಎಸ್. ಈಶ್ವರಪ್ಪ, ಸಿ.ಟಿ. ರವಿ, ಸೋಮಣ್ಣ, ಪ್ರೀತಂ ಗೌಡ, ಸಂಸದ ಪ್ರತಾಪ್ ಸಿಂಹ, ಜಿ.ಪಂ. ಸದಸ್ಯೆ ಮಂಜುಳಾ, ಬಿಜೆಪಿ ಜಿಲ್ಲಾಧ್ಯಕ್ಷ ಭಾರತೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕುಶಾಲನಗರ-ಸುಂಟಿಕೊಪ್ಪ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತಡೆಯಾಗಿರುವ ಹಿನ್ನೆಲೆ ಹಲವಷ್ಟು ಪ್ರವಾಸಿ ವಾಹನಗಳು ತಾವರೆಕೆರೆವರೆಗೆ ಆಗಮಿಸಿ ನಂತರ ವಾಪಸ್ ಆದವು.
-ವಿಜಯ್ ಹಾನಗಲ್