ಸಂಗಮದಲ್ಲಿ ನೀರಿನ ಮಟ್ಟ ಹೆಚ್ಚಳ

ಕೂಡಿಗೆ, ಆ. 8: ಹಾರಂಗಿ ಮತ್ತು ಕಾವೇರಿ ನದಿ ಸಂಗಮವಾಗುವ ಕೂಡಿಗೆಯಲ್ಲಿ ಎರಡೂ ನದಿಗಳ ನೀರು ಹೆಚ್ಚಾಗಿದ್ದು, ನದಿ ತಟದ ಮನೆಗಳತ್ತ ನೀರು ನುಗ್ಗುವ ಹಂತ ತಲುಪಿರುವ ಪರಿಣಾಮ ಮುನ್ನೆಚ್ಚರಿಕಾ ಕ್ರಮವಾಗಿ ನದಿ ತಟದಲ್ಲಿ ವಾಸಿಸುತ್ತಿರುವ 10ಕ್ಕೂ ಹೆಚ್ಚು ಕುಟುಂಬಗಳ ಸ್ಥಳಾಂತರ ಕಾರ್ಯ ನಡೆಯುತ್ತಿದೆ.

ಕಳೆದ ಸಾಲಿನಲ್ಲಿ ಈ ಸ್ಥಳದಲ್ಲಿಯೇ ನೀರಿನ ಪ್ರಮಾಣ ಹೆಚ್ಚಾಗಿ 80 ಕ್ಕೂ ಹೆಚ್ಚು ಮನೆಗಳು ಮುಳುಗಡೆಯಾಗಿ, ಸಾಮಗ್ರಿಗಳನ್ನು ಸಾಗಿಸಲು ಹಾಗೂ ಜನರನ್ನು ಸ್ಥಳಾಂತರಿಸಲು ಹರಸಾಹಸ ಪಡುವ ಪರಿಸ್ಥಿತಿ ಉಂಟಾಗಿತ್ತು. ಆ ಹಿನ್ನೆಲೆಯಲ್ಲಿ ಕಳೆದ ಬಾರಿಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಗ್ರಾಮ ಪಂಚಾಯ್ತಿ ವತಿಯಿಂದ ಮನೆಗಳ ಸಾಮಗ್ರಿ ಹಾಗೂ ಜನರನ್ನು ಸ್ಥಳಾಂತರಗೊಳ್ಳಲು ಸೂಚಿಸಿದ್ದು ಸಾಗಿಸಲಾಗುತ್ತಿದೆ.

ಗ್ರಾಮ ಪಂಚಾಯ್ತಿ ಸದಸ್ಯರಾದ ಕೆ.ವೈ. ರವಿ ಮತ್ತು ರಾಮಚಂದ್ರ ಅವರು ಕಳೆದ ಸಾಲಿನಲ್ಲಿ ನೀರಿನಿಂದ ಭಾರೀ ಅನಾಹುತಗಳಾದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯ್ತಿ ವತಿಯಿಂದ ಪರಿಹಾರ ಕೇಂದ್ರ ತೆರೆಯಲು ತೀರ್ಮಾನಿಸಿ, ಪ್ರಾಥಮಿಕ ಶಾಲೆಯಲ್ಲಿ ಕೇಂದ್ರವನ್ನು ತೆರೆಯಲಾಗಿದೆ. - ಕೆ.ಕೆ.ಎನ್.ಶೆಟ್ಟಿ