ಮಡಿಕೇರಿ, ಆ. 8: ಕಳೆದ 24 ಗಂಟೆಗಳ ಅವಧಿ ಸೇರಿದಂತೆ ಹಲವು ದಿನಗಳಿಂದ ಜಿಲ್ಲೆಯ ಹಲವಾರು ಕಡೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಈ ಅಂಕಿ ಅಂಶಗಳು ಜಿಲ್ಲಾ ಸರಾಸರಿ, ತಾಲೂಕು ಸರಾಸರಿ, ಹೋಬಳಿವಾರು ಲಭ್ಯವಾಗುತ್ತಿದೆಯಾದರೂ, ಗ್ರಾಮವಾರು ಸುರಿಯುತ್ತಿರುವ ಮಳೆಯ ಪ್ರಮಾಣ ಹೊರ ಪ್ರಪಂಚಕ್ಕೆ ತಿಳಿದು ಬರುತ್ತಿಲ್ಲ.

‘ಶಕ್ತಿ’ಯ ಅರಿವಿಗೆ ಬಂದಂತೆ ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯ ಬಿರುನಾಣಿ, ಪರಕಟಗೇರಿ, ತೆರಾಲು, ಬಾಡಗರಕೇರಿ, ಪೊರಾಡು, ಬಿ. ಶೆಟ್ಟಿಗೇರಿ ವ್ಯಾಪ್ತಿಯ ಕಂಡಂಗಾಲ, ರುದ್ರಗುಪ್ಪೆ, ವಿ. ಬಾಡಗ, ಶ್ರೀಮಂಗಲದ ಕುರ್ಚಿ, ಬೀರುಗ, ಶ್ರೀಮಂಗಲ, ಹುದಿಕೇರಿ, ಬೇಗೂರು, ಕುಟ್ಟ ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳು, ಪೊನ್ನಂಪೇಟೆ, ಕುಂದ, ಗೋಣಿಕೊಪ್ಪಲು, ನಾಪೋಕ್ಲು ವಿಭಾಗದ ಕಕ್ಕಬೆ, ಚೆಯ್ಯಂಡಾಣೆ, ನೆಲಜಿ, ನಾಪೋಕ್ಲು, ಭಾಗಮಂಡಲ ಹಾಗೂ ಸುತ್ತಮುತ್ತಲ ಗ್ರಾಮಗಳು, ಸೂರ್ಲಬ್ಬಿ, ಮುಟ್ಲು, ಹಮ್ಮಿಯಾಲ, ಶಾಂತಳ್ಳಿ ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳಲ್ಲಿ ದಾಖಲೆಯ ಮಳೆಯಾಗಿದೆ.

ಈ ಪ್ರದೇಶಗಳಲ್ಲಿ ಕಳೆದ ಎರಡು-ಮೂರು ದಿನದಿಂದ ಸರಾಸರಿ 12 ರಿಂದ 15 ಇಂಚಿನಷ್ಟು ಮಳೆ ಸುರಿದಿದೆ ಎನ್ನಲಾಗಿದೆ. ಇದರಿಂದಾಗಿ ಕಾವೇರಿ ಹಾಗೂ ಲಕ್ಷ್ಮಣತೀರ್ಥ ನದಿಗಳು ಸೇರಿದಂತೆ ಇನ್ನಿತರ ಉಪನದಿಗಳು, ತೋಡು-ತೊರೆಗಳು ಉಕ್ಕಿ ಹರಿಯಲಾರಂಭಿಸಿವೆ. ಹಾರಂಗಿ ಜಲಾಶಯಕ್ಕೂ ಭಾರೀ ಪ್ರಮಾಣದ ನೀರು ಹರಿದು ಬರುತ್ತಿದ್ದು, ಕೆ.ಆರ್.ಎಸ್.ನ ನೀರಿನ ಮಟ್ಟವೂ ಏರಿಕೆಯಾಗುತ್ತಿದೆ.