ಮಡಿಕೇರಿ, ಆ. 8: ಕೊಡಗು ಜಿಲ್ಲೆಯಲ್ಲಿ ಮಳೆ ವ್ಯಾಪಕವಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿ ರುವ ಹಿನ್ನೆಲೆ ರಸ್ತೆಯ ಪರಿಸ್ಥಿತಿ ಹದಗೆಡುತ್ತಿದ್ದು, ಅಧಿಕ ಭಾರ ತುಂಬಿದ ಭಾರಿ ಸರಕು ಸಾಗಾಣಿಕೆ ವಾಹನಗಳು ದಿನನಿತ್ಯ ಸಂಚರಿಸುವದರಿಂದ ರಸ್ತೆ ಬದಿ ಭೂಕುಸಿತದಿಂದಾಗಿ ರಸ್ತೆ ಮೇಲೆಯೇ ಮಣ್ಣು ಬಿದ್ದು ರಸ್ತೆ ಸಂಚಾರಕ್ಕೆ ತೊಂದರೆಯಾಗಿ ಸಾಕಷ್ಟು ಅಪಘಾತಗಳಿಗೆ ಕಾರಣವಾಗುತ್ತಿದೆ. ಈ ಹಿನ್ನೆಲೆ ಸಾರ್ವಜನಿಕ ಜೀವ ಮತ್ತು ಆಸ್ತಿಗಳ ಹಿತದೃಷ್ಟಿಯಿಂದ ವಾಹನದ ನೋಂದಣಿ ತೂಕ 16,200 ಕೆ.ಜಿ.ಗಿಂತ ಹೆಚ್ಚಿನ ತೂಕದ ಸರಕು ಸಾಗಾಣಿಕೆ ವಾಹನ ಮಲ್ಟಿ ಆಕ್ಸಿಲ್ ಟ್ರಕ್‍ಗಳ ಸಂಚಾರ ಮತ್ತು ಭಾರಿ ವಾಹನಗಳಾದ ಬುಲೆಟ್ ಟ್ಯಾಂಕರ್, ಶಿಫ್ ಕಾರ್ಗೋ ಕಂಟೈನರ್ ಲಾಂಗ್ ಚಾಸಿಸ್ (ಮಲ್ಟಿ ಆಕ್ಸಿಲ್) ಮತ್ತು ಮರಳು ಸಾಗಾಣಿಕೆ, ಮರಗಳ ದಿಮ್ಮಿಗಳನ್ನು ಸಾಗಿಸುವ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ಸೆಪ್ಟೆಂಬರ್ 6 ರವರೆಗೆ ಕೊಡಗು ಜಿಲ್ಲೆಯಲ್ಲಿ ಮಳೆಗಾಲ ಮುಗಿಯು ವವರೆಗೆ ನಿರ್ಭಂದಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಆದೇಶ ಹೊರಡಿಸಿದ್ದಾರೆ.
ಉಳಿದಂತೆ ಜಿಲ್ಲೆಯ ಸಾರ್ವಜನಿಕರ ಅನುಕೂಲಕ್ಕಾಗಿ ಅಡುಗೆ ಅನಿಲ, ಇಂಧನ ಪೂರೈಕೆ ವಾಹನಗಳು, ಸರ್ಕಾರಿ ಕೆಲಸದ ನಿಮಿತ್ತ ಉಪಯೋಗಿಸಲ್ಪಡುವ ವಾಹನಗಳು, ಶಾಲಾ-ಕಾಲೇಜು ವಾಹನಗಳು, ಸಾರ್ವಜನಿಕ ಪ್ರಯಾಣಿಕರ ಮಲ್ಟಿ ಆಕ್ಸಿಲ್ ಬಸ್ಸುಗಳಿಗೆ ವಿನಾಯಿತಿ ನೀಡಲಾಗಿದೆ.
ಗಾಳಿಬೀಡು, ಪಾಟಿ, ಕಾಲೂರು ಶಾಲೆ ರಸ್ತೆಯಲ್ಲಿ ಅಲ್ಲಲ್ಲಿ ಗುಡ್ಡಗಳ ಜರಿತದಿಂದ ರಸ್ತೆಗಳು ಹಾಳಾಗಿದ್ದು, ಸಂಚಾರ ಯೋಗ್ಯವಾಗಿರದ ಕಾರಣ ಮತ್ತು ಶೀಘ್ರವಾಗಿ ಅಡಚಣೆ ತೆರವು ಕಾಮಗಾರಿ ಕೈಗೊಂಡು ಸಂಚಾರಕ್ಕೆ ಯೋಗ್ಯವಾದ ರಸ್ತೆ ಕಲ್ಪಿಸುವ ನಿಟ್ಟಿನಲ್ಲಿ ಹಾಗೂ ಎಲ್ಲಾ ವಾಹನ ಸಂಚಾರಿಗಳ, ರಸ್ತೆ ಮತ್ತು ಸಾರ್ವಜನಿಕ ಸುರಕ್ಷತೆಯ ಹಿತದೃಷ್ಟಿಯಿಂದ ಡಿಸಾಸ್ಟರ್ ಮ್ಯಾನೇಜ್‍ಮೆಂಟ್ ಕಾಯ್ದೆ ಮತ್ತು ಮೋಟಾರ್ ವಾಹನ ಕಾಯ್ದೆ ಮತ್ತು ನಿಯಮಗಳ ಅಧಿಕಾರದಂತೆ ತಾತ್ಕಾಲಿಕವಾಗಿ ತಕ್ಷಣದಿಂದ ಜಾರಿಗೆ ಬರುವಂತೆ ತಾ. 31 ರವರೆಗೆ ಗಾಳಿಬೀಡು, ಫಾಟಿ, ಕಾಲೂರು ಶಾಲೆ ರಸ್ತೆಯಲ್ಲಿ ಎಲ್ಲಾ ತರಹದ ವಾಹನಗಳ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಆದೇಶಿಸಿದ್ದಾರೆ. ನಿಷೇಧಿತ ರಸ್ತೆಯ ಬದಲಿಗೆ ಕೆ. ನಿಡುಗಣೆ, ಹೆಬ್ಬೆಟ್ಟಗೇರಿ, ದೇವಸ್ತೂರು, ಕಾಲೂರು ಸಂಪರ್ಕ ರಸ್ತೆಯಲ್ಲಿ ಸಂಚರಿಸಬಹುದಾಗಿದೆ.