ಪೊನ್ನಂಪೇಟೆ ಆ. 8 : ಪೊನ್ನಂಪೇಟೆ ವ್ಯಾಪ್ತಿಯಲ್ಲಿ ಸುರಿದ ಮಳೆಯಿಂದಾಗಿ ಜನರು ಮನೆಯಿಂದ ಹೊರ ಬಾರದಂತಾಗಿದೆ.

ತೂಚಮಕೇರಿ ಗ್ರಾಮದ ಪರಿವಾರರ ಪ್ರಾಣೇಶ ಎಂಬವರ ಮನೆಯ ಹಿಂಭಾಗದ ಗೋಡೆ ಕುಸಿದಿದೆ. ಯಾವದೇ ಅಪಾಯ ಸಂಭವಿಸಿಲ್ಲ. ಮಾಪಿಳೆತೋಡು ಎಂಬಲ್ಲಿ ಆಲೀರ ಎಚ್. ಹಮೀದ್ ಹಾಗೂ ಉಮ್ಮರ್ ಎಂಬವರ ಮನೆಯ ಹಿಂಭಾಗದ ಮಣ್ಣು ಕುಸಿದಿದೆ. ಮಳೆ ಹೆಚ್ಚಾದರೆ ಮನೆಗೆ ಹಾನಿಯಾಗುವ ಆತಂಕ ಮೂಡಿಸಿದೆ. ಸ್ಥಳಕ್ಕೆ ಕಂದಾಯ ಪರಿವೀಕ್ಷಕ ನಿಶಾನ್, ಗ್ರಾಮ ಲೆಕ್ಕಾಧಿಕಾರಿ ನಿತನ್ ತೆರಳಿ ಪರಿಶೀಲನೆ ನಡೆಸಿದರು.

ಮಾಪಿಳೆತ್ತೋಡು ಎಂಬಲ್ಲಿ ನಿವೇಶನ ನಿರ್ಮಾಣಕ್ಕೆ ಪರಿವರ್ತಿಸಿರುವ ಗದ್ದೆಗಳಲ್ಲಿ ನೀರು ಪ್ರವಾಹದಿಂದ ಬೇಗೂರು ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಈ ಹಿಂದೆ ತಹಶೀಲ್ದಾರ್ ಭೇಟಿ ನೀಡಿ, ಸ್ಥಗಿತಕ್ಕೆ ಸೂಚಿಸಿದ್ದರೂ, ಕೂಡ ನಂತರ ಮಣ್ಣು ತೆರವುಗೊಳಿಸದ ಕಾರಣ ಸಮಸ್ಯೆ ಉಲ್ಭಣಿಸಿದೆ ಎಂದು ಗ್ರಾಮಸ್ಥ ಎ.ಎಚ್. ಅಬ್ದುಲ್ಲ ಆರೋಪಿಸಿದ್ದಾರೆ.

ಕಾಟ್ರಕೊಲ್ಲಿಯಲ್ಲಿ ರಸ್ತೆ ಮೂಲಕವೇ ನೀರು ಹರಿಯುತ್ತಿರುವದರಿಂದ ರಸ್ತೆ ಸಂಚಾರಕ್ಕೆ ತೊಡಕುಂಟಾಗಿದೆ. ರಸ್ತೆಯ ಕೆಳಗೆ ಇರುವ ಮನೆಗಳಿಗೆ ನೀರು ಹರಿಯುತ್ತಿದೆ. ಗದ್ದೆಗಳ ಏರಿ ಹೊಡೆದುಹೋಗಿದ್ದು, ನಾಟಿ ನಾಶವಾಗಿದೆ. ಬೇಗೂರುವಿನಲ್ಲಿ ಪ್ರವಾಹದ ನಡುವೆಯೂ ಮೇಕೆಯೊಂದು ಹೊಟ್ಟೆ ತುಂಬಿಸಿಕೊಳ್ಳುತ್ತಿರುವದು ಕಂಡು ಬಂದಿತು. ಚೋಡುಮಾಡ ಸತೀಶ್ ಪೆಮ್ಮಯ್ಯ ಎಂಬವರ ತೋಟ ಮಳೆಗೆ ಕೊಚ್ಚಿ ಹೋಗಿದೆ. ಹಳ್ಳಿಗಟ್ಟು ಭಾಗದಲ್ಲಿ ಸೇತುವೆ ತುಂಬಿ ಹರಿಯುತ್ತಿದ್ದು, ಸಂಚಾರ ಸ್ಥಗಿತಗೊಂಡಿದೆ. - ಚೆನ್ನನಾಯಕ್