ಮಡಿಕೇರಿ, ಆ. 8: ವೀರಾಜಪೇಟೆ ಸನಿಹದ ಕೆದಮುಳ್ಳೂರು ಗ್ರಾಮದಲ್ಲಿರುವ ಕ್ಲಬ್ ಮಹೀಂದ್ರ ಖಾಸಗಿ ರೆಸಾರ್ಟ್‍ನಲ್ಲಿ ಕೊಡವ ಜನಾಂಗದ ಧಾರ್ಮಿಕ ಉಡುಪಾದ ಕುಪ್ಯಚೇಲೆಯನ್ನು ಬಳಸಿ ಆಹಾರ ಸರಬರಾಜು ಮಾಡುವ ಮೂಲಕ ಸಾಂಸ್ಕøತಿಕ ಹಿರಿಮೆಗೆ ಅವಮಾನ ಮಾಡಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸ್ಥೆಯ ವಿರುದ್ಧ ವೀರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆ.

ವಕೀಲ ಎಂ.ಟಿ. ಕಾರ್ಯಪ್ಪ ಹಾಗೂ ಇತರ ಪ್ರಮುಖರು ಈ ಬಗ್ಗೆ ದೂರು ನೀಡಿದ್ದಾರೆ. ಇದು ಧಾರ್ಮಿಕತೆಯ ಹಿನ್ನೆಲೆ ಹೊಂದಿರುವ ಜನಾಂಗಕ್ಕೆ ಮಾಡಿದ ಅವಮಾನ ಎಂದು ದೂರುದಾರರು ಉಲ್ಲೇಖಿಸಿದ್ದಾರೆ. ಇದರಂತೆ ಗ್ರಾಮಾಂತರ ಪೊಲೀಸರು ಇಂದು ಕ್ಲಬ್‍ನ ಮುಖ್ಯಸ್ಥರನ್ನು ಠಾಣೆಗೆ ಕರೆಯಿಸಿ ವಿಚಾರಿಸಿ ಎಚ್ಚರಿಕೆ ನೀಡಿದ್ದಾರೆ.

ವೀರಾಜಪೇಟೆ ಕೊಡವ ಸಮಾಜ

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ವೀರಾಜಪೇಟೆ ಕೊಡವ ಸಮಾಜದ ಪ್ರಮುಖರು ಇಂದು ಅಧ್ಯಕ್ಷ ವಾಂಚೀರ ನಾಣಯ್ಯ ಅವರ ನೇತೃತ್ವದಲ್ಲಿ ರೆಸಾರ್ಟ್‍ಗೆ ತೆರಳಿ ಆಕ್ಷೇಪ ವ್ಯಕ್ತಪಡಿಸಿ ಪ್ರತಿಭಟನೆಗೆ ಮುಂದಾಗಿದ್ದರು. ಈ ಸಂದರ್ಭ ರೆಸಾರ್ಟ್‍ನ ಪ್ರಮುಖರು ಪ್ರಮಾದಕ್ಕೆ ಕ್ಷಮೆಯಾಚಿಸಿದ ಹಿನ್ನೆಲೆಯಲ್ಲಿ ಇದನ್ನು ಕೈಬಿಡಲಾಯಿತು.