ಕೂಡಿಗೆ, ಆ. 8 : ಹಾರಂಗಿ ಅಣೆಕಟ್ಟೆ ಭರ್ತಿಯಾದ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪಿ. ಅವರು ಹಾರಂಗಿಗೆ ಭೇಟಿ ನೀಡಿ, ಪರಿಶೀಲಿಸಿ, ಅಣೆಕಟ್ಟೆಯ ಒಳ ಹರಿವು ಮತ್ತು ಹೊರ ಹರಿವಿನ ಮಾಹಿತಿ ಪಡೆದು, ಮುಂಜಾಗೃತಾ ಕ್ರಮ ವಹಿಸಲು ಹಾರಂಗಿ ಅಣೆಕಟ್ಟೆಯ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಹಾರಂಗಿಗೆ ಪ್ರವಾಸಿಗರ ದಂಡು ಬರುತ್ತಿರುವ ಹಿನ್ನೆಲೆಯಲ್ಲಿ, ನೀರು ಅಪಾಯ ಮಟ್ಟದಲ್ಲಿರುವದರಿಂದ ಸಾರ್ವಜನಿಕರು ಮತ್ತು ಪ್ರವಾಸಿಗರು ಹೊಳೆಯ ಹತ್ತಿರ ಹಾಗೂ ಅಣೆಕಟ್ಟೆ ಸಮೀಪಕ್ಕೆ, ಬೃಂದಾವನಕ್ಕೆ ಬರುವದನ್ನು ನಿಷೇಧಿಸಲಾಗಿದೆ. Áರಂಗಿ ಅಣೆಕಟ್ಟೆಯಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ.
ಈ ಸಂದರ್ಭ ಡಿವೈಎಸ್‍ಪಿ ಮುರುಳೀಧರ್, ಉಪ ವಿಭಾಗಾಧಿಕಾರಿ ಜವರೇಗೌಡ, ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಗೋವಿಂದ್‍ರಾಜ್, ಕಂದಾಯ ಪರಿವೀಕ್ಷಕ ಮಧುಸೂದನ್, ಅಧಿಕಾರಿಗಳು, ಪೊಲೀಸ್ ಸಿಬ್ಬಂದಿಗಳು ಇದ್ದರು. - ಕೆ.ಕೆ. ನಾಗರಾಜ್ ಶೆಟ್ಟಿ