ವೀರಾಜಪೇಟೆ, ಆ. 6: ವೀರಾಜಪೇಟೆ ಪ.ಪಂ. ಮುಖ್ಯಾಧಿಕಾರಿ ಶ್ರೀಧರ್ ಕೈಗೊಂಡಿರುವ ವೀರಾಜಪೇಟೆ ಪಟ್ಟಣ ಅಗಲೀಕರಣಕ್ಕೆ ನಾಗರಿಕರು ವಿರೋಧಿಸಿದ್ದು ಅಗಲೀಕರಣ ವಿರುದ್ಧ ತಾ. 8ರಂದು ಅಪರಾಹ್ನ 12 ಗಂಟೆಯಿಂದ 2 ಗಂಟೆಯವರೆಗೆ ಪಟ್ಟಣ ಬಂದ್ ಮಾಡಲು ತೀರ್ಮಾನಿಸಲಾಗಿದೆ.
ವೀರಾಜಪೇಟೆಯ ಬೋರೇಗೌಡ ವಾಣಿಜ್ಯ ಸಂಕೀರ್ಣದ ಕನಕ ಸಭಾಂಗಣದಲ್ಲಿ ಹೈಕೋರ್ಟ್ ವಕೀಲ ಎನ್. ರವೀಂದ್ರನಾಥ್ ಕಾಮತ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪಟ್ಟಣದ ನಿವಾಸಿಗಳ ನಾಗರಿಕ ಸಮಿತಿ ಸಭೆಯಲ್ಲಿ ಕಾನೂನನ್ನು ಉಲ್ಲಂಘಿಸಿ ಶ್ರೀಧರ್ ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಪಟ್ಟಣದ ನಿವಾಸಿಗಳು ಹಾಗೂ ಪಟ್ಟಣ ಪಂಚಾಯಿತಿ ಸದಸ್ಯರುಗಳ ಗಮನಕ್ಕೆ ತಾರದೆ ರಸ್ತೆ ಅಗಲೀಕರಣಕ್ಕೆ ಮುಂದಾಗಿದ್ದಾರೆ. ಮಗ್ಗುಲ ಗ್ರಾಮದ ತಿರುವಿನಿಂದ ಆರ್ಜಿ ಸೇತುವೆಯ ತನಕದವರೆಗೆ ರಸ್ತೆ ಪ.ಪಂ.ಗೆ ಸೇರಿದುದರಿಂದ ಇದರಲ್ಲಿ ಇಲಾಖೆಯ ಹಸ್ತಕ್ಷೇಪ ಸರಿಯಲ್ಲ.
ವೀರಾಜಪೇಟೆಯಲ್ಲಿ 1977 ರಲ್ಲಿ ನಡೆದ ರಸ್ತೆ ಅಗಲೀಕರಣ ಹಾಗೂ ಅದರ ದಾಖಲೆಗಳು, ಅಗಲೀಕರಣದ ನಂತರ ಮತ್ತೆ ರಸ್ತೆ ಅಗಲೀಕರಣ ಮಾಡಬೇಕಾದರೆ ಕಟ್ಟಡದ ಮಾಲೀಕರಿಗೆ ರಾಜ್ಯ ಉಚ್ಚ ನ್ಯಾಯಾಲಯ ಪರಿಹಾರ ಕಡ್ಡಾಯ ಎಂದಿರುವ ಆದೇಶದ ದಾಖಲೆ ಗಳನ್ನು ಸಭೆಯ ಮುಂದೆ ಚರ್ಚಿಸಲಾಯಿತು.
ಇದೇ ಸಂದರ್ಭದಲ್ಲಿ ಮಾತನಾಡಿದ ರವೀಂದ್ರನಾಥ್ ಕಾಮತ್ ಅವರು ರಸ್ತೆ ಅಗಲೀಕರಣದ ಸಂಬಂಧದಲ್ಲಿ ಪಟ್ಟಣದ ನಿವಾಸಿಗಳು ಆತಂಕ ಪಡಬೇಕಾಗಿಲ್ಲ. ವೀರಾಜಪೇಟೆ ಪಟ್ಟಣದಲ್ಲಿ ಎರಡನೇ ಬಾರಿಗೆ ರಸ್ತೆ ಅಗಲೀಕರಣಗೊಳ್ಳುತ್ತಿ ರುವದರಿಂದ ಪರಿಹಾರಕ್ಕೆ ಉಚ್ಚ ನ್ಯಾಯಾಲಯದ ಆದೇಶವಿದೆ. ಅಧಿಕಾರಿಗಳು ಇಲ್ಲಿನ ನಿವಾಸಿಗಳನ್ನು ತಪ್ಪು ದಾರಿಗೆ ಎಳೆಯುತ್ತಿರುವದನ್ನು ಖಂಡಿಸುತ್ತೇವೆ ಎಂದರು.
ಸಭೆಯಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರುಗಳಾದ ಡಿ.ಪಿ.ರಾಜೇಶ್, ಮಹಮ್ಮದ್ ರಾಫಿ, ಎಸ್.ಎಚ್. ಮತೀನ್, ಮಾಜಿ ಸದಸ್ಯ ಎಸ್.ಎಚ್. ಮೈನುದ್ದೀನ್, ಐ.ಆರ್. ದುರ್ಗಾಪ್ರಸಾದ್ ಹಾಥಿಪ್ ಮನ್ನಾ, ಮನಿಯಪಂಡ ಕಾಳಪ್ಪ, ನಿವಾಸಿಗಳು, ವರ್ತಕರುಗಳು, ಸಂಘ ಸಂಸ್ಥೆಯ ಪ್ರತಿನಿಧಿಗಳು ಹಾಜರಿದ್ದರು.