ಸೋಮವಾರಪೇಟೆ, ಆ. 6: ರಾಜ್ಯ ಸರ್ಕಾರ ಟಿಪ್ಪು ಜಯಂತಿಯನ್ನು ರದ್ದುಗೊಳಿಸಿ ಆದೇಶ ನೀಡಿದ್ದರೂ ಟಿಪ್ಪು ಜಯಂತಿಯನ್ನು ಆಚರಿಸುವದಾಗಿ ಸಂಘಟನೆಯೊಂದರ ಪ್ರಮುಖರು ಹೇಳಿಕೆ ನೀಡಿರುವದು ಖಂಡನೀಯ ಎಂದು ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಮಾಳೇಟಿರ ಅಭಿಮನ್ಯುಕುಮಾರ್ ಹೇಳಿದ್ದಾರೆ.
ಕೊಡಗಿನ ಜನರ ಭಾವನೆಗಳಿಗೆ ವಿರುದ್ಧವಾಗಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಟಿಪ್ಪು ಜಯಂತಿಯನ್ನು ಜಾರಿಗೆ ತಂದು ಅನೇಕ ಸಂಘರ್ಷಕ್ಕೆ ಕಾರಣವಾಗಿತ್ತು. ಆಸ್ತಿ ಪಾಸ್ತಿಯೊಂದಿಗೆ ಮಾನವ ಜೀವಹಾನಿಯೂ ಸಂಭವಿಸಿದೆ. ಈ ಬಗ್ಗೆ ಜಿಲ್ಲೆಯ ಶಾಸಕರುಗಳಿಂದ ಸಲ್ಲಿಕೆಯಾದ ಮನವಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸ್ಪಂದಿಸಿ, ಟಿಪ್ಪು ಜಯಂತಿಯನ್ನು ರದ್ದುಗೊಳಿಸಿರುವ ಕ್ರಮ ಸ್ವಾಗತಾರ್ಹವಾಗಿದೆ ಎಂದು ಅಭಿಮನ್ಯುಕುಮಾರ್ ತಿಳಿಸಿದ್ದಾರೆ.
ಈ ಮಧ್ಯೆ ಕೊಡಗಿನ ಇತಿಹಾಸದಲ್ಲಿ ಕರಾಳ ಪುಟಗಳಲ್ಲಿ ದಾಖಲಾಗಿರುವ, ಟಿಪ್ಪುವಿನ ಜಯಂತಿಯನ್ನು ಮಾಡಲು ಹೊರಟಿರುವ ಸಂಘಟನೆಯೊಂದರ ಹೇಳಿಕೆ ಖಂಡನೀಯವಾಗಿದ್ದು, ಇಂತಹ ಕ್ರಮಗಳ ವಿರುದ್ಧ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ವಿವಾದಿತ ಜಯಂತಿ ನಡೆಸಲು ಜಿಲ್ಲಾಡಳಿತ ಯಾರಿಗೂ ಅವಕಾಶ ನೀಡಬಾರದು ಎಂದು ಅಭಿಮನ್ಯುಕುಮಾರ್ ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.