ಕೂಡಿಗೆ, ಆ. 5: ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೂಡಿಗೆ ಸರ್ಕಲ್ ಸಮೀಪದಿಂದ ಕೂಡಿಗೆ ಗ್ರಾಮಕ್ಕೆ ತೆರಳುವ ಉಪ ರಸ್ತೆಯು ಕಳೆದ 25 ವರ್ಷಗಳಿಂದ ಮುಚ್ಚಿ ಹೋಗಿತ್ತು. ಕೂಡಿಗೆ ಗ್ರಾಮಕ್ಕೆ ತೆರಳಲು ಮತ್ತು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಗ್ರಾಮಸಭೆ ಮತ್ತು ಮಾಸಿಕ ಸಭೆಗಳಲ್ಲಿ ಆ ಭಾಗದ ಸಾರ್ವಜನಿಕರು ಈ ಬಗ್ಗೆ ಚರ್ಚೆ ನಡೆಸಿದ್ದರು. ಅದರಂತೆ ಗ್ರಾಮಸ್ಥರ ಸಹಕಾರದೊಂದಿಗೆ ರಸ್ತೆ ತೆರವಿಗೆ ತೆರಳಿದ ಸಂದರ್ಭ ಪರ - ವಿರುದ್ಧ ಚರ್ಚೆಗಳು ನಡೆದವು.

ಇದಕ್ಕೆ ಸಂಬಂಧಪಟ್ಟಂತೆ ಕೂಡಿಗೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಪ್ರೇಮಲೀಲ ಮತ್ತು ಅಭಿವೃದ್ಧಿ ಅಧಿಕಾರಿ ಅಶ್ವಿನಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮುಚ್ಚಿಹೋಗಿದ್ದ ರಸ್ತೆಯಲ್ಲಿ ತಡೆಗೋಡೆ ನಿರ್ಮಾಣಗೊಂಡಿರುವ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ದ ರಸ್ತೆ ತೆರವಿನ ಕಾರ್ಯವನ್ನು ಸ್ಥಗಿತಗೊಳಿಸಿ, ಕಂದಾಯ ಇಲಾಖೆಯೊಂದಿಗೆ ಸರ್ವೆ ಕಾರ್ಯನಡೆಸಿ ಮುಂದಿನ ಕ್ರಮಕೈಗೊಳ್ಳಲು ತೀರ್ಮಾನಿಸಲಾಯಿತು.

ಈ ಸಂದರ್ಭ ಗ್ರಾ.ಪಂ. ಸದಸ್ಯರಾದ ರಾಮಚಂದ್ರ, ಕೆ.ವೈ.ರವಿ, ಮೋಹಿನಿ, ಬಸವೇಶ್ವರ ದೇವಾಲಯ ಸಮಿತಿಯ ಅಧ್ಯಕ್ಷ ಕೆ.ಕೆ. ಮಂಜುನಾಥ್, ಗ್ರಾ.ಪಂ ಮಾಜಿ ಉಪಾಧ್ಯಕ್ಷ ಕೆ.ಎಸ್. ಕಾಂತರಾಜ್, ಸ್ಥಳೀಯರಾದ ಪ್ರಕಾಶ, ಕೆ.ಪಿ. ಸೋಮಣ್ಣ, ರಂಗ, ಮಹೇಶ್, ಪ್ರವೀಣ್, ಪ್ರಶಾಂತ್ ಸೇರಿದಂತೆ ಗ್ರಾಮಸ್ಥರು ಇದ್ದರು.