ಗೋಣಿಕೊಪ್ಪ ವರದಿ, ಆ. 5: ದಶಕದ ಹಿಂದೆ ಯುಪಿಎ ಸರ್ಕಾರವಿದ್ದ ಸಂದರ್ಭ ಘೋಷಣೆ ಮಾಡಲಾಗಿದ್ದ ಸಾಲಮನ್ನಾ ಯೋಜನೆ ಅನುಷ್ಠಾನಗೊಳಿಸುವಲ್ಲಿ ಎಡವಿರುವ ಕೊಡಗು ಜಿಲ್ಲಾ ಸಹಕಾರ ಬ್ಯಾಂಕ್ ವಿರುದ್ದ ಹೋರಾಟ ನಡೆಸಲಾಗುವದು ಎಂದು ಸಾರ್ವಜನಿಕ ಹಿತರಕ್ಷಣಾ ಸಮಿತಿ ಜಿಲ್ಲಾಧ್ಯಕ್ಷ ಅಜ್ಜಮಾಡ ಕಟ್ಟಿ ಮಂದಯ್ಯ ಎಚ್ಚರಿಸಿದ್ದಾರೆ.
2008 ರಲ್ಲಿ 5 ಏಕರೆಗಿಂತ ಕಡಿಮೆ ತೋಟವಿರುವ ಬೆಳೆಗಾರರ ಸಾಲಮನ್ನಾ ಘೋಷಣೆ ಮಾಡಲಾಗಿತ್ತು. ಆದರೆ, ಬೆಳೆಗಾರರಿಗೆ ಯೋಜನೆಯನ್ನು ತಲಪಿಸುವಲ್ಲಿ ಜಿಲ್ಲಾ ಸಹಕಾರ ಬ್ಯಾಂಕ್ ಎಡವಿರುವ ದಾಖಲೆಇದ್ದು, ಈ ಬಗ್ಗೆ ಬ್ಯಾಂಕ್ ಸ್ಪಷ್ಟ ಮಾಹಿತಿ ನೀಡಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಸಾಲಗಾರರ ಪಟ್ಟಿಯನ್ನು ಸರ್ಕಾರಕ್ಕೆ ನೀಡುವಲ್ಲಿ ಬ್ಯಾಂಕ್ ಅಧಿಕಾರಿಗಳು ಎಡವಿದ್ದಾರೆ. ಇದರಿಂದ ಸಾಕಷ್ಟು ಬೆಳೆಗಾರರು ಯೋಜನೆಯಿಂದ ವಂಚಿತರಾಗಿದ್ದಾರೆ. ಈ ಬಗ್ಗೆ ಬ್ಯಾಂಕ್ ಅಧಿಕಾರಿಗಳಿಂದ ಮಾಹಿತಿ ಪಡೆದು ಮುಂದಿನ ಹೋರಾಟದ ಬಗ್ಗೆ ನಿರ್ಧರಿಸಲಾಗುವದು ಎಂದು ತಿಳಿಸಿದರು.
ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿಯಲ್ಲಿ ಮದ್ಯವರ್ತಿಗಳ ಹಾವಳಿಯಿಂದ ಸಾರ್ವಜನಿಕರಿಗೆ ಹೆಚ್ಚು ನಷ್ಟ ಉಂಟಾಗುತ್ತಿದೆ. ಕಚೇರಿಗಳಿಂದ ಮದ್ಯವರ್ತಿಗಳನ್ನು ದೂರವಿಡುವಂತೆ ಅಧಿಕಾರಿಗಳನ್ನು ಒತ್ತಾಯಿಸಲು ಸಮಿತಿಯಿಂದ ನಿರ್ಧರಿಸಲಾಗಿದೆ. ಲೋಕಾಯುಕ್ತ ನ್ಯಾಯಮೂರ್ತಿಗಳಿಂದ ಇತ್ತೀಚೆಗಷ್ಟೆ ಮದ್ಯವರ್ತಿಗಳನ್ನು ದೂರವಿಡಲು ಸೂಚನೆ ಇದ್ದರೂ ಕೂಡ ಪಾಲನೆಯಾಗುತ್ತಿಲ್ಲ ಎಂದು ಆರೋಪಿಸಿದರು.
ಇದೇ ರೀತಿ ವೀರಾಜಪೇಟೆ ಕಂದಾಯ, ಸರ್ವೆ ಇಲಾಖೆಯಲ್ಲೂ ಮದ್ಯವರ್ತಿಗಳಿಂದ ಸ್ಥಳೀಯರಿಗೆ ಹೆಚ್ಚು ಖರ್ಚಾಗುತ್ತಿದೆ. ಸಾಮಾನ್ಯವಾಗಿ ಕಚೇರಿಗೆ ಹೋಗುವವರಿಗೆ ಸೇವೆ ಪ್ರಾಮಾಣಿಕವಾಗಿ ದೊರೆಯುತ್ತಿಲ್ಲ. ತಹಶೀಲ್ದಾರ್ ಅವರಿಗೆ ಕ್ರಮಕ್ಕೆ ಆಗ್ರಹಿಸಲಾಗುವದು ಎಂದರು ತಿಳಿಸಿದರು.
ನಿಟ್ಟಿನಲ್ಲಿ ಸಮಿತಿ ಅಧಿಕಾರಿ ಗಳನ್ನು ನಿರಂತರ ವಾಗಿ ಒತ್ತಾಯಿಸುವ ಮೂಲಕ ಜನರಿಗೆ ಪ್ರಾಮಾಣಿಕ ಸೇವೆ ದೊರೆಯಲು ಅವಕಾಶ ಮಾಡಿ ಕೊಡಲು ಶ್ರಮಿಸಲಾಗುವದು ಎಂದರು.
ಕಾಡಾನೆಗಳಿಂದ ಆಗಿರುವ ಜೀವಹಾನಿಯ ಬಗ್ಗೆ ಅರಣ್ಯ ಇಲಾಖೆಯಿಂದ ಮಾಹಿತಿ ಪಡೆದುಕೊಂಡು, ಅದರ ಆಧಾರದಲ್ಲಿ ಕಾಡಾನೆಗಳನ್ನು ಸ್ಥಳಾಂತರಗೊಳಿಸಲು ಹಾಗೂ ಸಂತಾನ ಹರಣ ಮಾಡುವಂತೆ ಉಚ್ಛ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ದೂರು ದಾಖಲಿಸಲಾಗು ವದು ಎಂದರು.
ಗೋಷ್ಠಿಯಲ್ಲಿ ಸಮಿತಿ ಕಾರ್ಯಾಧ್ಯಕ್ಷ ಬಿ. ಎಸ್. ಕಾರ್ಯಪ್ಪ, ನಿರ್ದೇಶಕರುಗಳಾದ ಪಿ. ಕೆ. ಉತ್ತಪ್ಪ, ಲೀಲಾ ನಂಜಪ್ಪ, ಕೂಪದೀರ ಉತ್ತಪ್ಪ ಉಪಸ್ಥಿತರಿದ್ದರು.