ಮಡಿಕೇರಿ, ಆ. 5: ಮಡಿಕೇರಿಯಲ್ಲಿ ನೂತನ ಖಾಸಗಿ ಬಸ್ ನಿಲ್ದಾಣದಿಂದ ಬಸ್‍ಗಳು ತಮ್ಮ ಓಡಾಟ ಆರಂಭಿಸಿವೆ. ಸಂಚಾರ ಸುಗಮವಾಗಲೆಂದು ಈಗಾಗಲೇ ಜಿಲ್ಲಾಡಳಿತ ಏಕಮುಖ ಸಂಚಾರ ವ್ಯವಸ್ಥೆಯನ್ನು ಮಾಡಿದೆ. ಹಾಗಾಗಿ ಬಸ್‍ಗಳೂ ಸೇರಿದಂತೆ ಇತರ ವಾಹನಗಳಿಗೆ ಪತ್ರಿಕಾಭವನದ ಬಳಿಯಿಂದ ಕೈಗಾರಿಕಾ ಬಡಾವಣೆಗಾಗಿ ಸಂಚರಿಸಲು ಅನುವು ಮಾಡಿಕೊಡಲಾಗಿದೆ. ಇದರೊಂದಿಗೆ ರಸ್ತೆಯ ಒಂದು ಬದಿಯಲ್ಲಿ ಮಾತ್ರ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದ್ದು; ಇದರಿಂದಾಗಿ ಇತರ ವಾಹನಗಳಿಗೆ ಸಂಚರಿಸಲು ಹಾಗೂ ಪಾದಚಾರಿಗಳಿಗೆ ಅದರಲ್ಲೂ ವಿದ್ಯಾರ್ಥಿಗಳಿಗೆ ನಡೆದುಕೊಂಡು ಹೋಗಲು ತೀರಾ ಅನಾನುಕೂಲವಾಗಿದೆ.
ಆದರೆ, ಕೆಲವರು ಮಾತ್ರ ಅಡ್ಡಾದಿಡ್ಡಿ ವಾಹನಗಳನ್ನು ನಿಲ್ಲಿಸುತ್ತಿರುವದು ಸಾಮಾನ್ಯವಾಗಿದೆ. ರಸ್ತೆಯುದ್ದಕ್ಕೂ ಇರುವ ಅಂಗಡಿ, ವಾಣಿಜ್ಯ ಸಂಸ್ಥೆಗಳ ಗೇಟಿನ ಎದುರೇ ವಾಹನವನ್ನು ಅಡ್ಡಲಾಗಿ ನಿಲ್ಲಿಸಿ ತೆರಳುತ್ತಿರುವದು ಸಾಮಾನ್ಯವಾಗಿದೆ. ಇದರಿಂದಾಗಿ ಆಯಾ ಸಂಸ್ಥೆಗಳ ಮಾಲೀಕರು, ಸಿಬ್ಬಂದಿಗಳು ಒಳಪ್ರವೇಶಿಸಲು ಕಾಯಬೇಕಾದ ಪರಿಸ್ಥಿತಿ ಕಂಡು ಬರುತ್ತಿದೆ. ಅಷ್ಟೇ ಅಲ್ಲದೆ, ಕೆಲವರು ರಸ್ತೆಯ ಮತ್ತೊಂದು ಬದಿಯಲ್ಲಿಯೂ ವಾಹನಗಳನ್ನು ನಿಲ್ಲಿಸಿ ಭಾರೀ ವಾಹನಗಳ ಸಂಚಾರಕ್ಕೆ ತೊಡಕುಂಟು ಮಾಡುವದೂ ಆಗುತ್ತಿದೆ. ಇಂದು ಎಡಬದಿಯುದ್ದಕ್ಕೂ ವಾಹನಗಳು ನಿಂತಿದ್ದವು. ಆದರೆ ಯಾರೋ ಒಬ್ಬರು ಆಟೋರಿಕ್ಷಾವನ್ನು ಬಲಬದಿಯಲ್ಲಿ ನಿಲ್ಲಿಸಿ ತೆರಳಿದ್ದರು. ಕರ್ತವ್ಯದಲ್ಲಿದ್ದ ಪೊಲೀಸರು ವಾಹನದ ಚಕ್ರÀಕ್ಕೆ ‘ಲಾಕ್’ ಹಾಕಿ ತೆರಳಿದ್ದರು.
ಆ ಸಂದರ್ಭದಲ್ಲಿ ಎರಡು ಬಸ್‍ಗಳು ಬಂದಿವೆ. ರಿಕ್ಷಾವನ್ನು ಅಲ್ಲಿಂದ ತೆಗೆಯಲಾಗುತ್ತಿಲ್ಲ. ಇತ್ತ ಹಾರ್ನ್ ಮಾಡಿದರೂ ಇನ್ನೊಂದು ಬದಿಯಲ್ಲಿದ್ದ ಕಾರು ಮಾಲೀಕನ ಸುಳಿವಿಲ್ಲ; ಕೊನೆಗೆ ಹೇಗೋ ಒಂದು ಬಸ್ ಪ್ರಯಾಸದಿಂದ ದಾಟಿತು. ಅಷ್ಟರಲ್ಲಿ ಅಲ್ಲಿಯೇ ನಿಂತು ನೋಡಿಕೊಂಡೇ ಇದ್ದ ಕಾರಿನ ಮಾಲೀಕ ಬಂದು ತಮ್ಮ ಕಾರನ್ನು ತೆಗೆದರು. ಇನ್ನೊಂದು ಬಸ್ ಹಿಂದೆ ಸಾಲುಗಟ್ಟಿ ನಿಂತಿದ್ದ ವಾಹನಗಳು ಮುಂದಕ್ಕೆ ಚಲಿಸಿದವು.
-ಎಕ್ಸ್